ಲಾಕ್ ಡೌನ್ ನೆಪ : ಕಾರ್ಮಿಕ ವಿರೋಧಿ ನೀತಿ ಜಾರಿಗೆ ಹುನ್ನಾರ : ಐಎನ್‍ಟಿಯುಸಿ ಆರೋಪ

26/05/2020

ಮಡಿಕೇರಿ ಮೇ 26 : ಕೊರೋನಾ ಲಾಕ್‍ಡೌನ್ ನೆಪದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರಲು ಮುಂದಾಗಿದ್ದು, ಬಂಡವಾಳ ಶಾಹಿಗಳ ಪರವಾಗಿರುವ ಸರ್ಕಾರಗಳ ನಿಲುವಿನ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ಎನ್.ಎಂ.ಮುತ್ತಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲಾಕ್‍ಡೌನ್ ನಿಂದ ನಷ್ಟಕ್ಕೊಳಗಾಗಿರುವ ಬೃಹತ್ ಬಂಡವಾಳ ಶಾಹಿಗಳಿಗೆ ನೆರವು ಕಲ್ಪಿಸುವ ಏಕೈಕ ಉದ್ದೇಶದಿಂದ ಶ್ರಮಿಕ ವರ್ಗದ ಹಿತವನ್ನು ಕಡೆಗಣಿಸಿ ಕಾರ್ಮಿಕ ಕಾಯ್ದೆಯಲ್ಲಿನ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿದೆ ಎಂದು ಆರೋಪಿಸಿದರು.
ಕನಿಷ್ಟ ಕೂಲಿ ವೇತನ ಕಾಯ್ದೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಮುತ್ತಪ್ಪ, ದೇಶದಲ್ಲಿ ದುಡಿಯುತ್ತಿರುವ 45 ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರ ಹಿತವನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಟೀಕಿಸಿದರು.
ಬಿಜೆಪಿ ಆಡಳಿತದಲ್ಲಿರುವ ಗುಜರಾತ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕಾರ್ಮಿಕ ವಿರೋಧಿ ಕಾನೂನುಗಳನ್ನು ಈಗಾಗಲೇ ಜಾರಿಗೊಳಿಸಲಾಗಿದ್ದು, ಇದೇ ಮಾದರಿಯ ಕಾಯ್ದೆ ಕರ್ನಾಟಕದಲ್ಲೂ ಜಾರಿಗೊಳಿಸುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಕಾರ್ಮಿಕ ಸಂಘಟನೆಗಳು ಒಗ್ಗೂಡಿ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ಮುತ್ತಪ್ಪ ಎಚ್ಚರಿಕೆ ನೀಡಿದರು.
ಕಾರ್ಮಿಕರ ದುಡಿಮೆಯ ವೇಳೆಯನ್ನು 10 ಅಥವಾ 12 ಗಂಟೆಗೆ ಹೆಚ್ಚಳ ಮಾಡುವುದು, ಹೆಚ್ಚುವರಿ ಅವಧಿ ಕೆಲಸ ನಿರ್ವಹಣೆಗೆ ತುಟ್ಟಿ ಭತ್ಯೆ ನೀಡದೆ ಇರುವುದು, ಕನಿಷ್ಟ ವೇತನ ಕಾಯ್ದೆಯನ್ನು ಒಂದು ವರ್ಷದ ಅವಧಿಗೆ ಮುಂದೂಡುವುದು, ಕಾರ್ಖಾನೆಗಳ ಪರಿಶೀಲನೆ ಸಂದರ್ಭ ವಿನಾ ಕಾರಣ ಪ್ರಕರಣ ದಾಖಲಿಸುವಂತಿಲ್ಲ, 300ಕ್ಕಿಂತ ಕಡಿಮೆ ಕಾರ್ಮಿಕರಿರುವ ಕಾರ್ಖಾನೆಗಳನ್ನು ಸರ್ಕಾರದ ಅನುಮತಿ ಇಲ್ಲದೆ ಮುಚ್ಚಬಹುದು ಎಂಬ ಇತ್ಯಾದಿ ನೂತನ ನಿಯಮಗಳನ್ನು ಜಾರಿಗೆ ತರುವ ಪ್ರಯತ್ನಗಳು ನಡೆದಿದೆ. ಇದರ ಪರಿಣಾಮ ಕಾರ್ಮಿಕರ ದುಡಿಮೆಯ ಸಮಯ ಹೆಚ್ಚಾಗಲಿದೆ. ಸೂಕ್ತ ಪರಿಹಾರವಿಲ್ಲದೆ ಕಾರ್ಮಿಕರು ಯಾವುದೇ ಸಂದರ್ಭದಲ್ಲಿ ಕೆಲಸ ಕಳೆದುಕೊಳ್ಳಬಹುದು. ನೂತನ ಕಾಯ್ದೆಗಳಿಂದ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅವರು ವಿಶ್ಲೇಷಿಸಿದರು.
ಕಾರ್ಮಿಕರ ಕನಿಷ್ಟ ವೇತನ ಕಾಯ್ದೆಯನ್ನು ಈಗಾಗಲೇ ಹೈ ಕೋರ್ಟ್ ಎತ್ತಿ ಹಿಡಿದಿದ್ದು, ಸರ್ಕಾರ ಈ ಕಾಯ್ದೆಯನ್ನೆ ಅಮಾನತಿನಲ್ಲಿಟ್ಟರೆ ಬಂಡವಾಳ ಶಾಹಿಗಳಿಗೆ ಸಹಾಯವಾಗುತ್ತದೆ ಹೊರತು ಕಾರ್ಮಿಕರಿಗೆ ಯಾವುದೇ ಲಾಭವಿಲ್ಲ. ಇದರಿಂದ ಶ್ರಮಿಕ ವರ್ಗ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದೆ ಎಂದು ಮುತ್ತಪ್ಪ ಅಭಿಪ್ರಾಯಪಟ್ಟರು.
ಕಾರ್ಮಿಕರ ಶೋಷಣೆ ವಿರುದ್ಧ ದೂರು ದಾಖಲಿಸುವುದು ಇಲ್ಲದಂತಾದರೆ ಶೋಷಣೆ ಮತ್ತಷ್ಟು ಹೆಚ್ಚಾಗಬಹುದು. ಕಾರ್ಖಾನೆ ಎಂದು ಪರಿಗಣಿಸಲು ಇದ್ದ ಹತ್ತು ಕಾರ್ಮಿಕರ ಕನಿಷ್ಟ ಮಿತಿಯನ್ನು ಶೇ.50ಕ್ಕೆ ಏರಿಕೆ ಮಾಡುವುದುರಿಂದ ಶೇ.64.24 ಕಾರ್ಖಾನೆಗಳು ಕಾರ್ಮಿಕ ಮಿತಿಯಿಂದ ಹೊರಗುಳಿಯಲಿವೆ. ಒಂದು ವೇಳೆ ಈ ರೀತಿಯ ಪರಿವರ್ತನೆಯಾದರೆ ಕಾರ್ಮಿಕರಿಗೆ ಕಾನೂನಿನ ರಕ್ಷಣೆ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೊರೋನಾ ಲಾಕ್‍ಡೌನ್‍ನಿಂದಾಗಿ ಕಾರ್ಖಾನೆಯ ಕಾರ್ಮಿಕರು ಮಾತ್ರವಲ್ಲದೆ ಕಟ್ಟಡ ಕಾರ್ಮಿಕರು, ಮನೆ ಕೆಲಸದವರು, ಬೀದಿ ಬದಿ ವ್ಯಾಪಾರಿಗಳು, ತಲೆ ಹೊರೆ ಕಾರ್ಮಿಕರು, ಹೊಟೇಲ್ ಕಾರ್ಮಿಕರು, ಖಾಸಗಿ ಬಸ್‍ನ ಎಲ್ಲಾ ಸಿಬ್ಬಂದಿಗಳು, ವರ್ಕ್ ಶಾಪ್ ಕೆಲಸಗಾರರು ಸೇರಿದಂತೆ ವಿವಿಧ ವರ್ಗದ ಕಾರ್ಮಿಕರು ಹಾಗೂ ಚಾಲಕರುಗಳು ಸಂಕಷ್ಟವನ್ನು ಎದುರಿಸುತ್ತಿರುವುದರಿಂದ ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರ ಪರಿಹಾರ ಘೋಷಿಸಬೇಕೆಂದು ಮುತ್ತಪ್ಪ ಒತ್ತಾಯಿಸಿದರು.
ಅಸಂಘಟಿತ ವಲಯ ಕಟ್ಟಡ ಕಾರ್ಮಿಕರ ನೋಂದಾವಣಿ ಪ್ರಕ್ರಿಯೆಯೂ ಕುಂಟಿಗೊಂಡಿದ್ದು, ಜಿಲ್ಲೆಯಲ್ಲಿ ಕೇವಲ 4,500 ಕಾರ್ಮಿಕರ ಹೆಸರುಗಳನ್ನು ಮಾತ್ರ ನೋಂದಾಯಿಸಿಕೊಳ್ಳಲಾಗಿದೆ ಎಂದು ಟೀಕಿಸಿದರು.
::: ಸಹಾಯಕ್ಕೆ ಬಾರದ ಸೇವಾಸಿಂಧು :::
ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಟಿ.ಪಿ.ಹಮೀದ್ ಮಾತನಾಡಿ, ಆಟೋ ಚಾಲಕರಿಗಾಗಿ ರಾಜ್ಯ ಸರ್ಕಾರ ಐದು ಸಾವಿರ ರೂ. ಗಳ ಪರಿಹಾರ ಘೋಷಿಸಿದೆಯಾದರೂ ಇದಕ್ಕೆ ಸಂಬಂಧಿಸಿದ ಸೇವಾಸಿಂಧು ಅಂತರ್ಜಾಲ ವ್ಯವಸ್ಥೆ ಕಾರ್ಯವನ್ನೇ ನಿರ್ವಹಿಸುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಬಾರಿ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ ಎನ್ನುವ ಸಬೂಬು ಕೇಳಿ ಬರುತ್ತಿದೆ. ಕಳೆದ ಎರಡು ವರ್ಷಗಳಿಂದ ಸುಮಾರು 8 ಸಾವಿರ ಕಾರ್ಮಿಕರ ಹೆಸರನ್ನು ನೋಂದಾಯಿಸಲು ಕಾರ್ಮಿಕ ಇಲಾಖೆಯಲ್ಲಿ ಪ್ರಯತ್ನಿಸಲಾಯಿತ್ತಾದರೂ ನಿರಂತರ ಸರ್ವರ್ ಸಮಸ್ಯೆಯಿಂದ ಇಲ್ಲಿಯವರೆಗೆ ಹೆಸರುಗಳನ್ನು ನೊಂದಾಯಿಸಲು ಸಾಧ್ಯವೇ ಆಗಲಿಲ್ಲ. ಅಧಿಕಾರಿಗಳು ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಕಾರ್ಮಿಕರ ಹೆಸರುಗಳನ್ನು ನೋಂದಾಯಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕೆಂದು ಹಮೀದ್ ಒತ್ತಾಯಿಸಿದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಮಾತನಾಡಿ, ಲಾಕ್‍ಡೌನ್‍ನಿಂದಾಗಿ ಕಾರ್ಮಿಕರಂತೆ ಚಾಲಕರು ಕೂಡ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಆಟೋಚಾಲಕರಿಗಾಗಿ ಘೋಷಣೆಯಾಗಿರುವ 5 ಸಾವಿರ ರೂ. ಗಳ ಪ್ಯಾಕೇಜ್ ಮಾಲೀಕರಿಗಷ್ಟೇ ಲಭಿಸುವುದರಿಂದ ಚಾಲಕರಿಗೆ ಯಾವುದೇ ಲಾಭವಿಲ್ಲವೆಂದು ಟೀಕಿಸಿದರು.
ಸರ್ಕಾರದ ಸೌಲಭ್ಯ ಪಡೆಯಲು ಅಡ್ಡಿಯಾಗಿರುವ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೆಕೆಂದು ಉಸ್ಮಾನ್ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಐಎನ್‍ಟಿಯುಸಿ ಜಿಲ್ಲಾಧ್ಯಕ್ಷ ಕೆ.ಎಸ್.ಯತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ರಾಜ್‍ದಾಸ್ ಹಾಗೂ ಯುವ ಘಟಕದ ಅಧ್ಯಕ್ಷ ಪವನ್ ಪೆಮ್ಮಯ್ಯ ಉಪಸ್ಥಿತರಿದ್ದರು.