ಬೀದಿಗೆ ಬಿತ್ತು ಮಳೆಹಾನಿ ಸಂತ್ರಸ್ತರ ಬದುಕು : ಸೂರಿಲ್ಲದ ಬಡವರ ಬಾಳು ಅತಂತ್ರ

26/05/2020

ಮಡಿಕೇರಿ ಮೇ 26 : ((ವಿಶೇಷ ವರದಿ : ಅಂಚೆಮನೆ ಸುಧಿ, ಸಿದ್ದಾಪುರ)) ಕಳೆದ ಎರಡು ವರ್ಷಗಳಿಂದ ಮಹಾಮಳೆಯಲ್ಲಿ ಮಿಂದೇಳುತ್ತಿರುವ ಕೊಡಗು ಜಿಲ್ಲೆ ಮತ್ತೊಂದು ಮಳೆಗಾಲವನ್ನು ಸ್ವಾಗತಿಸಲು ಸಜ್ಜಾಗುತ್ತಿದೆ. ಆದರೆ 2018 ರಲ್ಲಿ ಮನೆ ಕಳೆದುಕೊಂಡ ಮಂದಿಗೆ ಇಂದಿಗೂ ನೂತನ ಮನೆಗಳನ್ನು ಹಸ್ತಾಂತರಿಸಲು ಸಾಧ್ಯವಾಗಿಲ್ಲ. 2019 ರ ಮಳೆಹಾನಿ ಸಂತ್ರಸ್ತರಿಗೆ ಹೊಸ ಮನೆ ಮರೀಚಿಕೆಯಾಗಿದೆ.
ನೆಲ್ಯಹುದಿಕೇರಿ, ಕರಡಿಗೋಡು, ಗುಹ್ಯ ಮತ್ತು ಕೂಡುಗದ್ದೆ ಗ್ರಾಮಗಳ ಅನೇಕ ಕುಟುಂಬಗಳು ಕಳೆದ ವರ್ಷದ ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಸರ್ಕಾರದ ಬಾಡಿಗೆ ಹಣವನ್ನು ನಂಬಿ ಬಾಡಿಗೆ ಮನೆಯಲ್ಲಿದ್ದವರು ಈಗ ಲಾಕ್ ಡೌನ್ ನಿಂದಾಗಿ ಕೆಲಸವೂ ಇಲ್ಲದೆ, ಬಾಡಿಗೆ ಹಣವೂ ಇಲ್ಲದೆ ಅತಂತ್ರರಾಗಿದ್ದಾರೆ. ಹೊಸ ಮನೆ ನಿರ್ಮಿಸಿಕೊಡುವ ಸರ್ಕಾರದ ಭರವಸೆ ಒಂದು ವರ್ಷವಾದರೂ ಸಾಕಾರಗೊಂಡಿಲ್ಲ. ಪಕ್ಕದ ಬೆಟ್ಟದಕಾಡು ಪ್ರದೇಶದಲ್ಲಿ ಸಂತ್ರಸ್ತರಿಗಾಗಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ನಿವೇಶನಗಳನ್ನು ಗುರುತಿಸಿ ಚೀಟಿಯ ಮೂಲಕ ಹಂಚಿಕೆ ಮಾಡಲಾಯಿತೇ ಹೊರತು ಇಲ್ಲಿಯವರೆಗೆ ಮನೆಗಳನ್ನು ನಿರ್ಮಿಸಿಕೊಟ್ಟಿಲ್ಲ. ಇದರಿಂದ ಬೇಸರಗೊಂಡಿರುವ ಅನೇಕರು ಊರು ಬಿಡುವ ಹಂತಕ್ಕೆ ಬಂದು ತಲುಪಿದ್ದಾರೆ. ಕೆಲವರು ಏನೂ ಮಾಡಲಾಗದೆ ಅಸಹಾಯಕ ಸ್ಥಿತಿಯಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಮಳೆಗಾಲ ಆರಂಭವಾಗಲು ಇನ್ನು ಕೇವಲ ಒಂದು ವಾರವಷ್ಟೇ ಬಾಕಿ ಉಳಿದಿದ್ದು, ಮಹಾಮಳೆಗೆ ನಮ್ಮ ಪಾಡೇನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಲಾಕ್ ಡೌನ್ ನಿಂದಾಗಿ ಹೊಟ್ಟೆ ಹಸಿವು ನೀಗಿಸಿಕೊಳ್ಳುವುದೇ ಕಷ್ಟವಾಗಿದೆ, ಇನ್ನು ಬಾಡಿಗೆ ಹಣ ಎಲ್ಲಿಂದ ತರುವುದು ಎಂದು ಪ್ರಶ್ನಿಸುತ್ತಿದ್ದಾರೆ.
ಕಳೆದ ವರ್ಷದ ಅತಿವೃಷ್ಟಿಯಿಂದ ಎಲ್ಲಾ ಜಾತಿ, ಧರ್ಮಗಳ ಕುಟುಂಬಗಳೂ ಸಂಕಷ್ಟಕ್ಕೆ ಸಿಲುಕಿವೆ. ಆದರೆ ಇಲ್ಲಿನ ಮುಸ್ಲಿಂ ಕುಟುಂಬಗಳ ನೆರವಿಗೆ ಸಹಾಯ ಟ್ರಸ್ಟ್ ಮತ್ತು ಕೇರಳ ರಾಜ್ಯದ ವಡಗರದ ದಯಾ ಟ್ರಸ್ಟ್ ಧಾವಿಸಿ ಬಂದಿವೆ.
ಗ್ರಾ.ಪಂ ಸದಸ್ಯ ಎ.ಕೆ.ಹಕೀಂ ಅವರು ತಮ್ಮ ಒಂದು ಎಕರೆ ಭೂಮಿಯನ್ನು ಸರ್ಕಾರಿ ದರದಲ್ಲಿ ಸಹಾಯ ಟ್ರಸ್ಟ್ ಗೆ ನೀಡಿದ ಪರಿಣಾಮ ಇಂದು 40 ಮನೆಗಳ ನಿರ್ಮಾಣ ಕಾರ್ಯದ ಯೋಜನೆ ಸಾಕಾರಗೊಳ್ಳುತ್ತಿದೆ. ಸುಮಾರು 15 ಮನೆಗಳ ಕಾಮಗಾರಿ ಪೂರ್ಣಗೊಂಡು ಹಸ್ತಾಂತರಕ್ಕೆ ಸಜ್ಜಾಗಿದೆ. ಉಳಿದ 25 ಮನೆಗಳ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಮುಸ್ಲಿಂ ಸಂತ್ರಸ್ತ ಕುಟುಂಬಗಳು ನಿಟ್ಟುಸಿರು ಬಿಡುವಂತ್ತಾಗಿದೆ.
ಟ್ರಸ್ಟ್‍ನ ಅಧ್ಯಕ್ಷ ಎ.ಕೆ.ಅಬ್ದುಲ್ಲ ಹಾಗೂ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮಣಿ ಮಾಸ್ಟರ್ ಅವರು ಕಾಳಜಿಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್ ಇವರ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.
ನೆಲ್ಯಹುದಿಕೇರಿಯ ನಲ್ವತ್ತೆಕ್ಕರೆ ಗ್ರಾಮದಲ್ಲಿ ಜಾಗ ಖರೀದಿಸಿರುವ ದಯಾಟ್ರಸ್ಟ್ 15 ಮನೆಗಳನ್ನು ನಿರ್ಮಿಸುತ್ತಿದ್ದು, ಈ ಮನೆಗಳು ಕೂಡ ಮುಸ್ಲಿಂ ಕುಟುಂಬಗಳಿಗೆ ಹಂಚಿಕೆಯಾಗಲಿದೆ.
ಹೀಗೆ ಮಾನವೀಯತೆ ಮೆರೆದ ಖಾಸಗಿ ಟ್ರಸ್ಟ್ ಗಳು ಬಡ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡುತ್ತಿದ್ದರೆ ಸರ್ಕಾರ ಮಾತ್ರ ಬಡಕುಟುಂಬಗಳನ್ನು ನಡು ಬೀದಿಯಲ್ಲೇ ಕೈಬಿಟ್ಟಿದೆ. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸಂಘ, ಸಂಸ್ಥೆಗಳು ಕೂಡ ಅಲ್ಪಕಾಲದ ನೆರವಿಗಿಂತ ಶಾಶ್ವತ ನೆಲೆಗೆ ಆದ್ಯತೆ ನೀಡುವುದು ಸೂಕ್ತ.