ಖಾಸಗಿ ವೈದ್ಯಕೀಯ ಸಂಸ್ಥೆಗಳು ಹಾಗೂ ವೈದ್ಯರೊಂದಿಗೆ ಸಭೆ : ಸಹಕರಿಸಲು ಕೊಡಗು ಜಿಲ್ಲಾಡಳಿತ ಮನವಿ

ಮಡಿಕೇರಿ ಮೇ 26 : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳು ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಸ್ಮೆಂಟ್(ಕೆ.ಸಿ.ಎಂ.ಇ) ವೈದ್ಯರುಗಳಿಗೆ ಕೋವಿಡ್-19 ಶಂಕಿತ ರೋಗಿಗಳನ್ನು ಗುರುತಿಸುವುದು ಹಾಗೂ ಎಸ್ಎಆರ್ಐ, ಐಎಲ್ಐ ಪ್ರಕರಣಗಳು ಕಂಡುಬಂದಲ್ಲಿ ಕೋವಿಡ್ ಆಸ್ಪತ್ರೆಗೆ ರೆಪರ್ ಮಾಡುವುದು ಹಾಗೂ ಈ ಕುರಿತು ಸಂಬಂಧಿತ ಅಂತರ್ಜಾಲದಲ್ಲಿ ನಮೂದಿಸಿ, ಪ್ರತಿದಿನ ವರದಿಯನ್ನು ಸಲ್ಲಿಸುವ ಮಹತ್ವದ ಕುರಿತು ಸಭೆ ನಡೆಯಿತು.
ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿ ಕೋವಿಡ್-19 ನಿಯಂತ್ರಣಕ್ಕೆ ಸಹಕಾರ ನೀಡುವಂತೆ ಕೆ.ಸಿ.ಎಂ.ಇ ವೈದ್ಯರುಗಳಿಗೆ ಕೋರಿದರು.
ಈ ಸಂದರ್ಭ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಮೋಹನ್ ಅವರು ಮಾಹಿತಿ ನೀಡಿ ಕೋವಿಡ್-19 ಗೆ ಸಂಬಂಧಿಸಿದ ಐಇಸಿ ಬಿತ್ತಿ ಪತ್ರಗಳನ್ನು ಆಸ್ಪತ್ರೆಯ ಮುಂಭಾಗದಲ್ಲಿಯೇ ಪ್ರದರ್ಶಿಸಬೇಕೆಂದು ತಿಳಿಸಿದರು. ಹಾಗೂ ಕ್ಲಿನಿಕ್ನಲ್ಲಿ ಕೋವಿಡ್ ಕುರಿತು ಮಾಹಿತಿ ನೀಡುವಂತೆ ಕೋರಿದರು.
ಲಸಿಕಾ ಕಾರ್ಯಕ್ರಮಕ್ಕೆ ಸಹಕಾರ ಕೊಡುವಂತೆ ಡಾ.ಗೋಪಿನಾಥ್ ಅವರು ಕೋರಿ, ಲಸಿಕೆ ನೀಡಿದ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.
ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕುರಿತು ಡಾ.ಆನಂದ್ ಅವರು ಮಾತನಾಡಿ ನಿಕ್ಷಯ್ ಕಾರ್ಯಕ್ರಮದಡಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಹಾಗೂ ಇತರೆ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಎಲ್ಲಾ ಖಾಸಗಿ ಕ್ಲಿನಿಕ್ಗಳ ಸಹಕಾರ ಕೋರಿದರು.
ಮಾಸ್ಕ್ ಧರಿಸುವುದು ಕಡ್ಡಾಯ: ನಗರದ ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶಿಸುವವರು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಮುಖ್ಯ ಪ್ರವೇಶ ದ್ವಾರದಲ್ಲಿಯೇ ಕಚೇರಿಗೆ ಪ್ರವೇಶಿಸುವವರಿಗೆ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಜ್ವರ ಇದೆಯೇ ಎಂದು ಪರೀಕ್ಷಿಸಲಾಗುತ್ತಿದೆ. ಅಂತೆಯೇ ಮಾಸ್ಕ್ ಧರಿಸದವರಿಗೆ ಪ್ರವೇಶ ನಿರ್ಭಂಧಿಸಲಾಗಿದೆ. ಸ್ಯಾನಿಟೈಸರ್ ಮೂಲಕ ಕಚೇರಿಗೆ ಬರುವವರಿಗೆ ಸ್ಯಾನಿಟೈಸರ್ ನೀಡಲಾಗುತ್ತಿದ್ದು, ಯಾವುದೇ ಸೋಂಕು ಸಂಬಂಧಿತ ಸಮಸ್ಯೆಗಳ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ನಿಗಾವಹಿಸಲಾಗಿದೆ.