ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ

ಬೆಂಗಳೂರು ಮೇ 26 : ರಾಜ್ಯ ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ ನಡೆಸಲು ಬಿಜೆಪಿ ವರಿಷ್ಟರು ಮುಂದಾಗಿದ್ದಾರೆ.
ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಸಚಿವರನ್ನು ಕೈಬಿಟ್ಟು, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ವರಿಷ್ಠರು ಆಲೋಚಿಸಿದ್ದಾರೆ.
ಕೊರೋನಾ ಸೋಂಕು ಒಂದು ಹಂತಕ್ಕೆ ಬಂದು ಆರ್ಭಟ ಕಡಿಮೆಯಾಗುತ್ತಿದ್ದಂತೆಯೆ ಎಲ್ಲಿ ಸಚಿವ ಪದವಿ ಹೋಗಿ ಮಾಜಿಗಳಾಗಿ ಬಿಡುತ್ತೇವೋ ಎಂಬ ಅಳುಕು ಹಲವು ಸಚಿವರನ್ನು ಈಗಿನಿಂದಲೇ ಕಾಡಲಾರಂಭಿಸಿದೆ.
ಇನ್ನೂ ಕೆಲವು ಸಚಿವರ ಕಾರ್ಯಕ್ಷಮತೆ ಆಧರಿಸಿ ಖಾತೆ ಬದಲಾವಣೆ ಮಾಡಲಾಗುವುದು ಎಂದೂ ಸಹ ಬಿಜೆಪಿ ಮೂಲಗಳು ಹೇಳಿವೆ.
ಉತ್ತಮವಾಗಿ ಕೆಲಸ ನಿರ್ವಹಿಸಿದವರಿಗೆ ಉತ್ತಮ ಖಾತೆ. ಈವರೆಗೆ ತಮ್ಮ ಕೆಲಸದಲ್ಲಿ ಕಳಪೆ ನಿರ್ವಹಣೆ ಮಾಡಿರುವ ಸಚಿವರಿಗೆ ಕೋಕ್ ನೀಡಲಿದ್ದು, ಹೊಸಬರಿಗೆ ಸಂಪುಟದಲ್ಲಿ ಆದ್ಯತೆ ನೀಡಲು ಅಲೋಚನೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಆರಂಭದಲ್ಲಿ ಸಚಿವರು ಚೆನ್ನಾಗಿ ಕೆಲಸ ಮಾಡಿದರೂ ನಂತರ ಉತ್ಸಾಹ ಕಳೆದುಕೊಂಡು ಕಾಲ ಹರಣ ಮಾಡುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.