ಮಂಡ್ಯ, ಮಳವಳ್ಳಿ ಕೊರೋನಾ ಮುಕ್ತ

27/05/2020

ಮಂಡ್ಯ ಮೇ 26 : ಜುಬಿಲಿಯಂಟ್ ಸಂಪರ್ಕದಿಂದ ಆತಂಕ ಸೃಷ್ಠಿಸಿದ್ದ ಮಂಡ್ಯ ನಗರ ಮತ್ತು ತಬ್ಲಿಘೀ ನಂಟಿನಿಂದಾಗಿ ನಲುಗಿದ್ದ ಮಳವಳ್ಳಿ ಇದೀಗ ಕೊರೋನಾ ಮುಕ್ತ ಪಟ್ಟಣ ಎನ್ನಿಸಿಕೊಂಡಿದ್ದು ಇದರ ನಡುವೆ ಇಂದು ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲದಿರುವುದು ಸಕ್ಕರೆನಾಡಿಗೆ ತುಸು ನೆಮ್ಮದಿ ತಂದಿದೆ.
ಇಡೀ ಮಂಡ್ಯ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ ಏ.7 ರಂದು ಕೊರೋನಾ ಪ್ರಕರಣ ಕಾಣಿಸಿಕೊಳ್ಳುವ ಮೂಲಕ ಮಳವಳ್ಳಿ ಪಟ್ಟಣ ಇಡೀ ಜಿಲ್ಲೆಯಲ್ಲಿ ಆತಂಕ ಮೂಡಿಸಿತ್ತು. ಸುಮಾರು 22 ಜನರಿಗೆ ಕೊರೋನಾ ಸೋಂಕು ತಗುಲಿತ್ತಾದರೂ ಇದೀಗ ಅಷ್ಟೇ ವೇಗವಾಗಿ ಸೋಂಕಿತರೆಲ್ಲರು ಗುಣಮುಖರಾಗುವ ಮೂಲಕ ಇದೀಗ ಮಳವಳ್ಳಿ ಪಟ್ಟಣ ಕೊರೋನಾ ಮುಕ್ತವಾಗಿದೆ.
ದೆಹಲಿಯಿಂದ ಬಂದಿದ್ದ ತಬ್ಲಿಘಿ ಜಮಾತ್ ಸದಸ್ಯರಿಂದ ಮಳವಳ್ಳಿ ಪಟ್ಟಣಕ್ಕೆ ಅಂಟಿದ್ದ ಕೊರೋನಾ ಸೋಂಕು ಪ್ರತಿದಿನ ಏರಿಕೆಯಾಗುತ್ತಾ ಬರೋಬ್ಬರಿ 22 ಜನರಿಗೆ ಸೋಂಕು ಹರಡುವ ಮೂಲಕ ಕೊರೋನಾ ಅಟ್ಟಹಾಸ ಮೆರೆದಿತ್ತು. ಇಡೀ ಜಿಲ್ಲೆಯಲ್ಲಿಯೇ ಮಳವಳ್ಳಿ ಪಟ್ಟಣ ಹಾಟ್ ಸ್ಪಾಟ್ ಆಗಿ ರೆಡ್ ಝೋನ್ ವಲಯಕ್ಕೆ ಸೇರಿಕೊಂಡಿತ್ತು.