ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಲೀಗ್ : ಕೂರ್ಗ್ ಮೌಂಟ್ ಲಯನ್ಸ್ ತಂಡ ಪ್ರಥಮ, ಕಾವೇರಿ ಮಕ್ಕಳು ತಂಡ ದ್ವೀತಿಯ

27/05/2020

ಮಡಿಕೇರಿ ಮೇ 27 : ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಚೊಚ್ಚಲ ಬಾರಿಗೆ ಐಪಿಎಲ್ ಮಾದರಿಯಲ್ಲಿ  ಪತ್ರಕರ್ತರಿಗೆ ಆಯೋಜಿಸಿದ್ದ ಕೊಡಗು ಪ್ರೆಸ್ ಕ್ಲಬ್ ಲೀಗ್ ಚಾಂಪಿಯನ್‍ಶಿಪ್ ಅನ್ನು ಕೂರ್ಗ್ ಮೌಂಟ್ ಲಯನ್ಸ್ ತಂಡ ತನ್ನದಾಗಿಸಿಕೊಂಡಿದೆ. ಚೀಯಂಡಿರ ತೇಜಸ್ ಪಾಪಯ್ಯ ಮಾಲೀಕತ್ವದ ತಂಡವನ್ನು ಸುವರ್ಣ ಮಂಜು ನಾಯಕತ್ವದಲ್ಲಿ ಮುನ್ನಡೆಸಿದ್ದರು.
ಬಿ.ಎಸ್. ಲೋಕೇಶ್ ಸಾಗರ್ ಮಾಲೀಕತ್ವದ ಎಸ್.ಎ. ಮುರಳೀಧರ್ ನಾಯಕತ್ವದ ಕಾವೇರಿ ಮಕ್ಕಳು ತಂಡ ದ್ವಿತೀಯ ಸ್ಥಾನ ಪಡೆಯಿತು. ಫೈನಲ್ ಪಂದ್ಯದಲ್ಲಿ ಕೂರ್ಗ್ ಮೌಂಟ್ ಲಯನ್ಸ್ ತಂಡ ಕಾವೇರಿ ಮಕ್ಕಳು ತಂಡದ ಮೇಲೆ ಸುಲಭ ಜಯ ದಾಖಲಿಸಿತು. ಪ್ರಥಮ ಸ್ಥಾನ ಪಡೆದ ತಂಡಕ್ಕೆ 50 ಸಾವಿರ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 40 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ಲಾಕ್ ಡೌನ್ ಮುಕ್ತಗೊಂಡ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತದೆ.
ಕೂರ್ಗ್ ಮೌಂಟ್ ಲಯನ್ಸ್
ಚೀಯಂಡಿ ತೇಜಸ್ ಪಾಪಯ್ಯ (ಫ್ರಾಂಚೈಸಿ), ಸುವರ್ಣ ಮಂಜು (ನಾಯಕ), ಅಜ್ಜಮಕ್ಕಡ ವಿನು ಕುಶಾಲಪ್ಪ, ದಿವಾಕರ್ ಜಾಕಿ, ವಿನಯ್, ಟಿ.ಆರ್. ಪ್ರಭುದೇವ್, ಮಾಲಂಬಿ ದಿನೇಶ್, ಸುನೀಲ್ ಪೊನ್ನೇಟಿ, ಯಶೋಧಾ, ಉಜ್ವಲ್ ರಂಜಿತ್, ಕುಪ್ಪಂಡ ದತ್ತಾತ್ರಿ, ಸಣ್ಣುವಂಡ ಕಿಶೋರ್ ನಾಚಪ್ಪ, ಸಂತೋಷ್ ರೈ, ಮಡ್ಲಂಡ ಅಶೋಕ್, ಮನೋಜ್ (ಕೋಚ್).
ಕಾವೇರಿ ಮಕ್ಕಳು
ಬಿ.ಎಸ್. ಲೋಕೇಶ್ ಸಾಗರ್ (ಫ್ರಾಂಚೈಸಿ), ಎಸ್.ಎ. ಮುರಳೀಧರ್ (ನಾಯಕ), ಕೊಳಂಬೆ ಉದಯ್ ಮೊಣ್ಣಪ್ಪ, ಜಿ.ವಿ. ರವಿಕುಮಾರ್, ಹಿರಿಕರ ರವಿ, ಸತೀಶ್ ನಾರಾಯಣ (ಅಪ್ಪಿ), ಎಚ್.ಎಸ್. ಹರೀಶ್‍ಕುಮಾರ್, ರಂಗಸ್ವಾಮಿ, ಕೆ.ಕೆ. ನಾಗರಾಜಶೆಟ್ಟಿ, ಅಶ್ವಥ್, ನವೀನ್ ಸುವರ್ಣ, ಹೇಮಂತ್ ಮಾಸ್ಟರ್ (ಕೋಚ್).
(ಚಿತ್ರ: 27ಎಂಡಿಕೆಎಂ1… ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಕೊಡಗು ಪ್ರೆಸ್ ಕ್ಲಬ್ ಲೀಗ್ ಚಾಂಪಿಯನ್‍ಶಿಪ್‍ನಲ್ಲಿ ಪ್ರಥಮ ಸ್ಥಾನ ಪಡೆದ ಕೂರ್ಗ್ ಮೌಂಟ್ ಲಯನ್ಸ್ ತಂಡ. ಚಿತ್ರ: 27ಎಂಡಿಕೆಎಂ2… ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಕೊಡಗು ಪ್ರೆಸ್ ಕ್ಲಬ್ ಲೀಗ್ ಚಾಂಪಿಯನ್‍ಶಿಪ್‍ನಲ್ಲಿ ದ್ವಿತೀಯ ಸ್ಥಾನ ಪಡೆದ ಕಾವೇರಿ ಮಕ್ಕಳು ತಂಡ.
======

ಅತ್ಯುತ್ತಮ ಆಟಗಾರರು
ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಹಾಗೂ ಪಂದ್ಯಾವಳಿ ಪುರುಷೋತ್ತಮ ಪ್ರಶಸ್ತಿಗೆ ಕೂರ್ಗ್ ಮೌಂಟ್ ಲಯನ್ಸ್ ತಂಡದ ಆಟಗಾರ ಅಜ್ಜಮಕ್ಕಡ ವಿನು ಕುಶಾಲಪ್ಪ ಭಾಜನರಾಗಿದ್ದಾರೆ. ಬೆಸ್ಟ್ ಬ್ಯಾಟ್ಸ್‍ಮ್ಯಾನ್ ಪ್ರಶಸ್ತಿಯನ್ನು ಕಾವೇರಿ ಮಕ್ಕಳು ತಂಡದ ಆಟಗಾರರಾದ ವಿನೋದ್ ಕುಶಾಲನಗರ ಭಾಜನರಾಗಿದ್ದಾರೆ. ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಕೂರ್ಗ್ ಮೌಂಟ್ ಲಯನ್ಸ್ ನಾಯಕ ಸುವರ್ಣ ಮಂಜು ಪಡೆದುಕೊಂಡಿದ್ದಾರೆ. ಬೆಸ್ಟ್ ಕ್ಯಾಚ್ ಪ್ರಶಸ್ತಿಯನ್ನು ಚಿತ್ತಾರ ಟೈಗರ್ ತಂಡದ ಅಲ್ಲಾರಂಡ ವಿಠಲ ನಂಜಪ್ಪ ಪಡೆದುಕೊಂಡಿದ್ದಾರೆ.
======

ಥರ್ಮಲ್ ಟೆಸ್ಟ್
ಕರೊನಾ ವೈರಾಣು ಸೋಂಕು ಹರಡುವ ಆತಂಕದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್ ಅವರ ಸಹಕಾರದಿಂದ ವೈದ್ಯಕೀಯ ತಂಡದಿಂದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ಪತ್ರಕರ್ತರನ್ನು ಥರ್ಮಲ್ ಟೆಸ್ಟ್‍ಗೆ ಒಳಪಡಿಸಲಾಗಿತ್ತು. ಪೊನ್ನಂಪೇಟೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಡಿ.ಕುಮಾರ್ ಸ್ಯಾನಿಟೈಸರ್ ಒದಗಿಸಿದ್ದರು.
======

ಸಮಾರಂಭ ರಹಿತ
ಕರೊನಾ ಹಿನ್ನೆಲೆಯಲ್ಲಿ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ ಆಯೋಜಿಸಲಿಲ್ಲ. ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮ ಕೂಡ ನಡೆಯಲಿಲ್ಲ. ಪ್ರೇಕ್ಷಕ ರಹಿತವಾಗಿ ನೇರವಾಗಿ ಪಂದ್ಯಾವಳಿ ನಡೆಯಿತು. ದೊಡ್ಡ ಮಟ್ಟದ ಪಂದ್ಯಾವಳಿಯ ಉದ್ಘಾಟಿಸಲು, ಉದ್ಘಾಟನಾ ಸಮಾರಂಭ ಮತ್ತು ಸಮಾರೋಪ ಸಮಾರಂಭ ಆಯೋಜಿಸದರಿಂದ ಅತಿಥಿಗಳನ್ನು ಕೂಡ ಆಹ್ವಾನಿಸಲಿಲ್ಲ. ಮಾರ್ಚ್ 22 ರಂದು ನಡೆಯಬೇಕಾಗಿದ್ದ ಕ್ರಿಕೆಟ್ ಪಂದ್ಯಾವಳಿ ಕರೊನಾ ಹಿನ್ನೆಲೆಯಲ್ಲಿ ಮುಂದೂಡಿತ್ತು. ರಾಜ್ಯ ಸರ್ಕಾರ ಷರತ್ತು ಬದ್ಧವಾಗಿ ಕ್ರೀಡೆಗೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ಕ್ರಿಕೆಟ್ ಪಂದ್ಯಾವಳಿ ನಡೆಸಲಾಯಿತು.

ಏಳು ತಂಡ
ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಕೊಡಗು ಪ್ರೆಸ್ ಕ್ಲಬ್ ಸದಸ್ಯತ್ವ ಪಡೆದಿರುವ ಪತ್ರಕರ್ತರನ್ನೊಳಗೊಂಡ 7 ತಂಡ ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು. ಎಂ.ಎ. ಅಜೀಜ್ ಮಾಲೀಕತ್ವದ ಎ.ಎಸ್. ಮುಸ್ತಾಫಾ ನಾಯಕತ್ವದ ಬೆಂಕಿ ಚೆಂಡು, ರೆಜಿತ್ ಕುಮಾರ್ ಗುಹ್ಯ ಮಾಲೀಕತ್ವದ ಪ್ರೇಮ್ ನಾಯಕತ್ವದ ಅಗ್ನಿ, ಎಚ್.ಕೆ. ಜಗದೀಶ್ ಮಾಲೀಕತ್ವದ ಕೆ.ಎ. ಆದಿತ್ಯ ನಾಯಕತ್ವದ ರೈಸಿಂಗ್ ಸ್ಟಾರ್. ಟಿ.ಎನ್. ಮಂಜುನಾಥ್ ಮಾಲೀಕತ್ವದ ಪಳೆಯಂಡ ಪಾರ್ಥ ಚಿಣ್ಣಪ್ಪ ನಾಯಕತ್ವದ ಟೀಮ್ ವೀವರ್ಸ್, ಸವಿತಾ ರೈ ಮಾಲೀಕತ್ವದ ವಿಜಯ ಹಾನಗಲ್ ನಾಯಕತ್ವದ ಚಿತ್ತಾರ ಟೈಗರ್ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.