ಮುಂಗಾರು ಆರಂಭ : ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್

May 27, 2020

ಮಡಿಕೇರಿ ಮೇ.27 : ಜಿಲ್ಲೆಯಲ್ಲಿ 2018 ಮತ್ತು 2019 ನೇ ಸಾಲಿನಲ್ಲಿ ಮುಂಗಾರು ಮಳೆ ಸಂದರ್ಭದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಗಮನದಲ್ಲಿರಿಸಿಕೊಂಡು ಪ್ರತೀ ವರ್ಷದಂತೆ ಈ ವರ್ಷವೂ ಸಹ ಮುಂಗಾರು ಮಳೆ ಪೂರ್ವ ತಯಾರಿಯನ್ನು ಜಿಲ್ಲಾಡಳಿತದಿಂದ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಈವರೆಗೆ ಜಿಲ್ಲಾಡಳಿತದಿಂದ ಮಾಡಿಕೊಂಡಿರುವ ಪೂರ್ವ ತಯಾರಿಯ ವಿವರ ಇಂತಿದೆ: ಕಳೆದ ವರ್ಷದಂತೆ ಈ ವರ್ಷವೂ ಸಹ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಪೋರ್ಸ್) ಮೇ ಮಾಹೆಯ ಅಂತ್ಯದೊಳಗೆ ಜಿಲ್ಲೆಗೆ ಆಗಮಿಸಲಿದೆ.
ಈಗಾಗಲೇ ಜಿಲ್ಲೆಯ ಎಲ್ಲಾ ಹೋಬಳಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಅಧಿಕಾರಿಗಳು ತಾವು ನಿಯೋಜಿಸಲ್ಪಟ್ಟ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಸಭೆ ನಡೆಸಿ, ಈ ಹಿಂದೆ ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶಗಳು, ಪ್ರಕೃತಿ ವಿಕೋಪದ ತರಹ ಇತ್ಯಾದಿ ಮಾಹಿತಿಗಳನ್ನು ಕ್ರೋಢೀಕರಿಸಿ, ಮುಂಜಾಗ್ರತೆಯಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಪಟ್ಟ ತಾಲ್ಲೂಕು ಆಡಳಿತದೊಂದಿಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಕಾರ್ಯದಲ್ಲಿ ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪವನ್ನು ಯಶಸ್ವಿಯಾಗಿ ಎದುರಿಸಲು ಬೇಕಾದ ಬೋಟ್, ಮನಿಲಾ ರೋಪ್, ಆಕ್ಸೆಲ್, ಸರ್ಚ್ ಲೈಟ್, ಛತ್ರಿ, ಗಂಬೂಟು, ರೈನ್ ಕೋಟ್, ಲೈಫ್ ಜಾಕೇಟ್ ಇತ್ಯಾದಿ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದ್ದು, ಇನ್ನೂ ಅಗತ್ಯವಿರುವ ಸಂಖ್ಯೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಟೆಂಡರುದಾರರು ಮೇ ಮಾಹೆಯ ಅಂತ್ಯದೊಳಗೆ ಸಾಮಾಗ್ರಿಗಳನ್ನು ಪೂರೈಸಲಿದ್ದಾರೆ.
ಮುಂಗಾರು ಮಳೆ ಸಂಬಂಧ ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಎಲ್ಲಾ ಅಧಿಕಾರಿಗಳು ರಜೆಯ ಮೇಲೆ ತೆರಳದೆ ಕೇಂದ್ರ ಸ್ಥಾನದಲ್ಲಿ ಲಭ್ಯವಿದ್ದು, ಅವರವರ ಇಲಾಖಾ ವ್ಯಾಪ್ತಿಯಲ್ಲಿ ಅಗತ್ಯ ಮತ್ತು ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಅಗ್ನಿ ಶಾಮಕ/ ಗೃಹ ರಕ್ಷಕ/ ಪೊಲೀಸ್ ಇಲಾಖೆಯಿಂದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಉಂಟಾಗಬಹುದಾದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಪೂರ್ವ ತಯಾರಿ ನಡೆಸಲಾಗುತ್ತಿದೆ.
ಪರಿಹಾರ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದ್ದಲ್ಲಿ ಅದಕ್ಕೆ ಬೇಕಾದ ಸೂಕ್ತ ಕಟ್ಟಡಗಳನ್ನು ಈಗಾಗಲೇ ಗುರುತಿಸಿಟ್ಟುಕೊಳ್ಳಲಾಗಿದೆ.
ಜಿಲ್ಲಾಡಳಿತವು ರಾಜ್ಯ ಪ್ರಕೃತಿ ವಿಕೋಪ ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಭಾರತೀಯ ಹವಾಮಾನ ಇಲಾಖೆಯಿಂದ ನೀಡಲಾಗುವ ಹವಾಮಾನ ಮುನ್ಸೂಚನೆಗಳನ್ನು ಪಡೆದು, ಜಿಲ್ಲೆಗೆ ಏನಾದರೂ ಪ್ರತಿಕೂಲ ಹವಾಮಾನವಿದ್ದಲ್ಲಿ ಅದನ್ನು ಸಾರ್ವಜನಿಕರಿಗೆ ತಿಳಿಸಿ, ಎಚ್ಚರ ಮೂಡಿಸಲು ಜಿಲ್ಲಾಧಿಕಾರಿ ಕಚೇರಿಯಿಂದ ಹವಾಮಾನ ಮುನ್ಸೂಚನೆಯನ್ನು ಸಾಮಾಜಿಕ ಜಾಲತಾಣ, ವಾಟ್ಸಾಪ್ ಮತ್ತು ಮಾಧ್ಯಮಗಳ ಮುಖಾಂತರ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಸಂಭವಿಸುವ ಯಾವುದೇ ಪ್ರಕೃತಿ ವಿಕೋಪಕ್ಕೆ ತಕ್ಷಣ ಸ್ಪಂದಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಕೃತಿ ವಿಕೋಪ ನಿಯಂತ್ರಣಾ ಕೊಠಡಿ(ಸಂಖ್ಯೆ :1077 ವಾಟ್ಸಾಪ್ ಸಂ: 8550001077) ಯನ್ನು ಸನ್ನದ್ಧವಾಗಿರಿಸಿದ್ದು, ಈ ನಿಯಂತ್ರಣ ಕೊಠಡಿಯು 24*7 ಕಾರ್ಯ ನಿರ್ವಹಿಸಲಿದೆ.
ಅಪಾಯದ ಸ್ಥಳದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಸ್ಥಳೀಯ ಪ್ರಾಧಿಕಾರಿಗಳ ಮೂಲಕ ಜನರಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಪ್ರಕೃತಿ ವಿಕೋಪ ನಿಧಿಯಲ್ಲಿ ಸಾಕಷ್ಟು ಅನುದಾನ ಲಭ್ಯವಿದೆ.
2018 ನೇ ಸಾಲಿನ ಪ್ರಕೃತಿ ವಿಕೋಪದಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಈ ವರ್ಷದ ಮುಂಗಾರು ಮಳೆ ಪ್ರಾರಂಭವಾಗುವ ಮುಂಚೆಯೇ ಅವರಿಗಾಗಿ ಸರ್ಕಾರದ ವತಿಯಿಂದ ನಿರ್ಮಿಸಲಾಗುತ್ತಿರುವ ಮನೆಗಳನ್ನು ಹಸ್ತಾಂತರಿಸಲು ಕ್ರಮ ವಹಿಸಲಾಗುತ್ತಿದೆ.
ಹೀಗೆ ಮುಂಬರುವ ಮುಂಗಾರು ಮಳೆಯಲ್ಲಿ ತಲೆದೋರಬಹುದಾದ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತವು ಸಜ್ಜಾಗಿದ್ದು, ಜಿಲ್ಲೆಯ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.