ವಿವಿಧ ಆಶ್ರಮಗಳಿಗೆ ಜಿಲ್ಲಾಧಿಕಾರಿ ಭೇಟಿ : ಆಶ್ರಯ ಪಡೆದವರ ಯೋಗಕ್ಷೇಮ ವಿಚಾರಣೆ

May 27, 2020

ಮಡಿಕೇರಿ ಮೇ 27 : ಸುಂಟಿಕೊಪ್ಪದ ವಿಕಾಸ್ ಜನಸೇವಾ ಟ್ರಸ್ಟ್ ನ ಜೀವನ ದಾರಿ ಆಶ್ರಮಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ಪರಿಶೀಲಿಸಿದರು.
ಆಶ್ರಮದ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಟ್ರಸ್ಟ್ ಅಧ್ಯಕ್ಷ ಹೆಚ್.ಕೆ.ರಮೇಶ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಆಶ್ರಮಕ್ಕೆ ನಿಯಮಾನುಸಾರ ಅಗತ್ಯ ನೆರವು ಕಲ್ಪಿಸುವುದಾಗಿ ಭರವಸೆ ನೀಡಿದರು. ಆಶ್ರಯ ಪಡೆದಿರುವ ಅನಾಥರು ಹಾಗೂ ವಯೋವೃದ್ದರ ಆರೋಗ್ಯದ ಬಗ್ಗೆ ಕಾಳಜಿ ತೋರುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು. ಕೋವಿಡ್ 19 ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚಿಸಿದ ಅವರು ಆಶ್ರಮದಲ್ಲಿದ್ದವರ ಯೋಗಕ್ಷೇಮ ವಿಚಾರಿಸಿದರು.
ಆಶ್ರಮದ ಕಾರ್ಯ ಚಟುವಟಿಕೆಗಳ ಕುರಿತು ಹೆಚ್.ಕೆ.ರಮೇಶ್ ವಿವರಿಸಿದರು.
::: ಶ್ರೀಶಕ್ತಿ ಆಶ್ರಮ :::
ಮಡಿಕೇರಿಯ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀಶಕ್ತಿ ವೃದ್ಧಾಶ್ರಮಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಎಲ್ಲಾ ವಯೋವೃದ್ಧರ ಯೋಗಕ್ಷೇಮ ವಿಚಾರಿಸಿದರು. ಹಿರಿಯ ಜೀವಗಳ ಆರೋಗ್ಯದ ಮೇಲೆ ನಿಗಾ ಇಡುವಂತೆ ಸಿಬ್ಬಂದಿಗಳಿಗೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿದರು.
::: ತನಲ್ ಆಶ್ರಮ :::
ಅನಾಥ ಹಾಗೂ ನಿರ್ಗತಿಕ ಮಹಿಳೆಯರ ಆಶ್ರಯ ತಾಣವಾಗಿರುವ ಮಡಿಕೇರಿಯ ತನಲ್ ಸಂಸ್ಥೆಗೂ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಆಶ್ರಯ ಪಡೆದವರ ಆರೋಗ್ಯ ವಿಚಾರಿಸಿದರು. ಕೊರೋನಾ ಸೋಂಕು ವ್ಯಾಪಿಸದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಸ್ವಚ್ಛತೆ ಮತ್ತು ಆಶ್ರಮದ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಮೇಲುಸ್ತುವಾರಿ ಎಂ.ಹೆಚ್.ಮೊಹಮ್ಮದ್ ಮುಸ್ತಫ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಅರುಂಧತಿ, ಹಿರಿಯ ನಾಗರೀಕರ ಮತ್ತು ವಿಕಲಚೇತನರ ಕಲ್ಯಾಣ ಇಲಾಖೆ ಅಧಿಕಾರಿ ಸಂಪತ್ ಕುಮಾರ್ ಮತ್ತಿತರರು ಭೇಟಿ ಸಂದರ್ಭ ಹಾಜರಿದ್ದರು.

error: Content is protected !!