ತಿರುಪತಿ ಆಸ್ತಿ ಮಾರಾಟ ವಿವಾದ

28/05/2020

ಬೆಂಗಳೂರು ಮೇ 27 : ತಿರುಪತಿ ದೇವಸ್ಥಾನದ ಆಸ್ತಿ ಮಾರಾಟ ಮಾಡುವ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿ ಭಕ್ತರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವ ಆಂಧ್ರಪ್ರದೇಶ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶ್ರೀರಾಮ ಸೇನೆ, ಆಸ್ತಿ ಮಾರಾಟಕ್ಕಾಗಿ ಸಾಧುಸಂತರು, ಭಕ್ತರು, ವಿದ್ವಾಂಸರ ಸರ್ಕಾರೇತರ ಸಮಿತಿ ರಚಿಸಲು ಆಗ್ರಹಿಸುವಂತೆ ಆಂಧ್ರಪ್ರದೇಶ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಆಂಧ್ರಪ್ರದೇಶ ಸರ್ಕಾರದ ಅಧೀನದಲ್ಲಿರುವ, ಟಿಟಿಡಿ ಮಂಡಳಿ ಆಸ್ತಿ ಮಾರಾಟಕ್ಕೆ ಮುಂದಾಗಿದೆ. ದೇವಸ್ಥಾನದ ಭಕ್ತರು ದಾನ ನೀಡಿದ್ದ ಐವತ್ತಕ್ಕೂ ಹೆಚ್ಚು ಆಸ್ತಿಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿದೆ.
ಇದೊಂದು ಹೇಯ ನಡೆಯಾಗಿದ್ದು, ಇಡೀ ಭಕ್ತ ಸಮೂಹ, ಹಿಂದೂ ಧರ್ಮಕ್ಕೆ ಮಾಡುವ ದ್ರೋಹವಾಗಿದೆ ಎಂದು ಬೆಂಗಳೂರು ಶ್ರೀರಾಮ ಸೇನೆ ಘಟಕ ತನ್ನ ಮನವಿ ಪತ್ರದಲ್ಲಿ ಆರೋಪಿಸಿದೆ.
ಆಸ್ತಿ ಮಾರಾಟಕ್ಕೆ ಮುಂದಾದ ಬೆಳವಣಿಗೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಭಕ್ತರ, ಸಾಧುಸಂತರ, ಹಿಂದೂ ಸಂಘಟನೆಗಳ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಆದರೆ ಆಸ್ತಿ ಮಾರಾಟಕ್ಕೆ ರಾಜ್ಯಪಾಲರ ನೇತೃತ್ವದಲ್ಲಿ ಸರ್ಕಾರೇತರ ಸಮಿತಿ ರಚಿಸಬೇಕು. ಆಂಧ್ರ ಪ್ರದೇಶದ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ರಾಜ್ಯ ಸಕಾರಕ್ಕೆ ಸೂಚನೆ ನೀಡಬೇಕು. ಸರ್ಕಾರದ ಕಾನೂನು ಬಾಹಿರ , ಸಂವಿಧಾನ ವಿರೋಧಿ ನೀತಿಯನ್ನು ತಡೆ ಹಿಡಿಯುವಂತೆ ಶ್ರೀರಾಮಸೇನೆ ಆಗ್ರಹಿಸಿದೆ.