ಸಾಲ ವಿತರಣೆ ಗೊಂದಲ ನಿವಾರಣೆಗೆ ಜಿಲ್ಲಾಧಿಕಾರಿ ಸೂಚನೆ

May 29, 2020

ಮಡಿಕೇರಿ ಮೇ 28 : ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ನೀಡಿರುವ ಆದೇಶ ಹಾಗೂ ಸರಕಾರದ ಸುತ್ತೋಲೆ ಕುರಿತಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಕೆಡಿಸಿಸಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ಪ್ರಸಕ್ತ ( 2020-21 ನೇ) ಸಾಲಿನಲ್ಲಿ ಸಹಕಾರ ಸಂಸ್ಥೆಗಳು ಹಾಗೂ ಬ್ಯಾಂಕುಗಳು ಕೃಷಿ ಸಾಲ ವಿತರಿಸುವಾಗ ಸರಕಾರದ ನೂತನ ನಿಯಮಾವಳಿಯ ಪ್ರಕಾರ ಸಾಲ ವಿತರಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ರಾಜ್ಯದ ರೈತರಿಗೆ 2019-20 ನೇ ಸಾಲಿನಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ನೀಡಿರುವ ನಿವ್ವಳ ಶೂನ್ಯ ಬಡ್ಡಿ ದರ ಅನ್ವಯವಾಗುವಂತೆ ಗರಿಷ್ಠ ರೂ.3 ಲಕ್ಷವರೆಗಿನ ಸಾಲವನ್ನು 2020ರ ಮೇ 31ರೊಳಗೆ ಮರು ಪಾವತಿಸದೇ ಇದ್ದರೆ ಕೇಂದ್ರ ಸರ್ಕಾರದ ಶೇ.3 ರ ಪ್ರೋತ್ಸಾಹ ಧನ ಮತ್ತು ಶೇ.2ರ ಆರ್ಥಿಕ ಸಹಾಯ ದೊರೆಯದೆಂದು ನಬಾರ್ಡ್ ಸುತ್ತೋಲೆಯಲ್ಲಿ ತಿಳಿಸಿದ್ದು, ರಿಸರ್ವ್ ಬ್ಯಾಂಕಿನ ಹೊಸ ಆದೇಶದ ಸುತ್ತೋಲೆಯಂತೆ ಸಾಲ ಮುಂದೂಡಿಕೆಗೆ ಸಂಬಂಧಿಸಿದಂತೆ ಹೊಸ ಆದೇಶವನ್ನು ನಿರೀಕ್ಷಿಸಲಾಗಿದೆ. ಈ ಕುರಿತಂತೆ ಇರುವ ಗೊಂದಲಗಳ ಬಗ್ಗೆ ಈಗಾಗಲೇ ಜಿಲ್ಲಾ ಅಗ್ರಣೀ ಬ್ಯಾಂಕ್ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಮತ್ತು ನಬಾರ್ಡ್ ಸಂಸ್ಥೆಯ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ ಸದ್ಯದಲ್ಲಿಯೇ ಸಂಬಂಧಪಟ್ಟವರಿಂದ ಉತ್ತರ ನಿರೀಕ್ಷಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ರಿಸರ್ವ್ ಬ್ಯಾಂಕಿನ ಇತ್ತೀಚಿನ ಸುತ್ತೋಲೆಯಂತೆ ಸಾಲಗಳ ಮುಂದೂಡಲ್ಪಡುವ ಪ್ರಕ್ರಿಯೆಯು 2020ರ ಆಗಸ್ಟ್ ತಿಂಗಳ ಕೊನೆಯವರೆಗೆ ಉತ್ಪಾದಕ ಸಾಲಗಳಿಗೆ ಅನ್ವಯಿಸುವಂತೆ ಅವಧಿಯನ್ನು ವಿಸ್ತರಿಸಲಾಗಿದೆ. ಈ ಬಗ್ಗೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಗ್ರಾಮೀಣ ಬ್ಯಾಂಕುಗಳು ಈಗಾಗಲೇ ತಮ್ಮೆಲ್ಲಾ ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸುವುದರ ಮೂಲಕ ಈ ಸೌಲಭ್ಯವನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿಗಳು ಮಾತನಾಡಿ, ಜಿಲ್ಲೆಯ ರೈತರಿಗೆ ಸಾಲ ವಿತರಿಸುವಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ರಿಸರ್ವ ಬ್ಯಾಂಕಿನ ಹೊಸ ನಿಯಮದಂತೆ ಮರುಪಾವತಿ ಮುಂದೂಡಲ್ಪಡುವ ದಿನಾಂಕ (31.08.2020) ದ ವರೆಗೆ ಹೊಸ ನಿಯಮಗಳ ಬಗ್ಗೆ ಗೊಂದಲವಿದ್ದಲ್ಲಿ ಸರಕಾರಕ್ಕೆ ಪತ್ರ ಬರೆದು ಪರಿಹರಿಸಿಕೊಳ್ಳುವಂತೆ ಉಪ ನಿಬಂಧಕರಿಗೆ ಸೂಚಿಸಿದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ, ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ.ಸಲೀಂ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ (ಕೆ.ಡಿ.ಸಿ.ಸಿ) ಬ್ಯಾಂಕ್ ಅಧಿಕಾರಿಗಳು  ಉಪಸ್ಥಿತರಿದ್ದರು.