ಹಿಜ್ಬುಲ್ ಮುಜಾಹಿದ್ದೀನ್ ಕಾರ್ಯಕರ್ತರ ಬಂಧನ

29/05/2020

ಶ್ರೀನಗರ ಮೇ 28 : ಜಮ್ಮು-ಕಾಶ್ಮೀರದ ಗಡಿ ಜಿಲ್ಲೆಯಾದ ಕುಪ್ವಾರದ ಹಂದ್ವಾರಾದಲ್ಲಿ ಹಿಜ್ಬುಲ್ ಮುಜಾಹಿದ್ದೀನ್(ಎಚ್‍ಎಂ) ಸಂಘಟನೆಯ ಸ್ಥಳೀಯ ಮಟ್ಟದ ಇಬ್ಬರು ಕಾರ್ಯಕರ್ತರನ್ನು ಭದ್ರತಾ ಪಡೆಗಳು ಬಂಧಿಸಿದ್ದು, ಎರಡು ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಂಡಿದ್ದಾರೆ.
ನಿರ್ದಿಷ್ಟ ಮಾಹಿತಿಯಂತೆ ಪೊಲೀಸರು, 30 ರಾಷ್ಟ್ರೀಯ ರೈಫಲ್ಸ್(ಆರ್ ಆರ್) ಮತ್ತು ಸಿಆರ್‍ಪಿಎಫ್‍ನ 92 ಬೆಟಾಲಿಯನ್ ಒಳಗೊಂಡ ಜಂಟಿ ತಪಾಸಣಾ ಶಿಬಿರವನ್ನು ಹಂದ್ವಾರದ ಕ್ರಾಲ್‍ಗುಂಡ್‍ನ ಪಂಡಿತ್‍ಪೋರಾದಲ್ಲಿ ಸ್ಥಾಪಿಸಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
`ನಾಕಾ ತಪಾಸಣೆ ನೋಡಿದ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಆದರೆ ಅವರನ್ನು ಭದ್ರತಾ ಪಡೆಗಳು ಬೆನ್ನಟ್ಟಿ ಬಂಧಿಸಿವೆ. ಆರೋಪಿಗಳನ್ನು ಆಸಿಫ್ ಅಹ್ಮದ್ ದರ್ ಮತ್ತು ಮುಜಾಮಿಲ್ ಅಹ್ಮದ್ ಪೀರ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಎರಡು ಪಿಸ್ತೂಲ್‍ಗಳು, ಅನೇಕ ಪಿಸ್ತೂಲ್ ಮ್ಯಾಗಜೀನ್‍ಗಳು ಮತ್ತು 20 ಪಿಸ್ತೂಲ್ ಗುಂಡುಗಳ ಸುತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ. ಉಗ್ರರ ಸಹವರ್ತಿಗಳನ್ನು ಗುರುತಿಸಲು ತನಿಖೆ ಆರಂಭಿಸಲಾಗಿದೆ” ಎಂದು ಅವರು ಹೇಳಿದ್ದಾರೆ.