`ಬೋಗಸ್ ಪ್ಯಾಕೇಜ್’ : ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಟೀಕೆ

29/05/2020

ಮಡಿಕೇರಿ ಮೇ 29 : ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವ 20 ಲಕ್ಷ ಕೋಟಿಯ ಪ್ಯಾಕೇಜ್ `ಬೋಗಸ್ ಪ್ಯಾಕೇಜ್’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆ.ಪಿ.ಸಿ.ಸಿ) ಕಾರ್ಯಾಧ್ಯಕ್ಷ ಸಲೀಂ ಅಹಮದ್ ಟೀಕಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪ್ರತಿಯೊಬ್ಬರ ಅಕೌಂಟ್‍ಗೆ 15 ಲಕ್ಷ ರೂ. ಹಾಕುವುದಾಗಿ ಪ್ರಧಾನಿ ಹೇಳಿದ್ದರು. ಆದರೆ ಇದುವರೆಗೂ ಯಾರಿಗೂ ಆ ಹಣ ಬಂದಿಲ್ಲ. ಅದೇ ರೀತಿ ಇದು ಕೂಡಾ ಬೋಗಸ್ ಎಂದು ಲೇವಡಿ ಮಾಡಿದರು.
ಕೊರೋನಾದಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. 50 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡುವಂತೆ ಕಾಂಗ್ರೆಸ್‍ನಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಪುಟ್ಟ ರಾಜ್ಯಗಳಾದ ತೆಲಂಗಾಣ ಹಾಗೂ ಕೇರಳ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದ್ದರೂ, ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮಾತ್ರ ದೊಡ್ಡ ಮೊತ್ತದ ಪ್ಯಾಕೇಜ್ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಲಸೆ ಕಾರ್ಮಿಕರ ನಿರ್ಲಕ್ಷ್ಯ: ರಾಜ್ಯದಿಂದ ಬೇರೆ ಬೇರೆ ರಾಜ್ಯಕ್ಕೆ ಹೊರಟ್ಟಿದ್ದ ವಲಸೆ ಕಾರ್ಮಿಕರಿಗೆ ಬಸ್ ಹಾಗೂ ರೈಲು ವ್ಯವಸ್ಥೆ ಮಾಡಿರಲಿಲ್ಲ. ಬೆಂಗಳೂರಿನ ಮೆಜಿಸ್ಟಿಕ್‍ಗೆ ಕೆಪಿಸಿಸಿ ಅಧ್ಯಕ್ಷರು ತೆರಳಿ, ಒಂದು ಕೋಟಿ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿ ತಕ್ಷಣವೇ ಚೆಕ್ ನೀಡಿದರು. ಅದಾದ ಮೇಲೆ, ಕಾಂಗ್ರೆಸ್‍ಗೆ ಅದರ ಶ್ರೇಯಸ್ಸು ಹೋಗಲಿದೆ ಎಂಬ ಕಾರಣದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾರ್ಮಿಕರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದರು ಎಂದು ಟೀಕಿಸಿದರು.
ಸಮನ್ವಯತೆ ಕೊರತೆ: ರಾಜ್ಯ ಸರಕಾರದ ಸಚಿವರಲ್ಲಿಯೇ ಸಮನ್ವಯತೆ ಇಲ್ಲ. ಹೀಗಾಗಿಯೇ ಕೊರೋನಾದ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿಯನ್ನು ಸಚಿವ ಎಸ್.ಸುರೇಶ್‍ಕುಮಾರ್ ಅವರಿಗೆ ನೀಡಲಾಗಿದೆ. ಪಿಪಿಇ ಕಿಟ್, ಕೊರೋನಾ ಪರೀಕ್ಷಾ ಕಿಟ್, ಸ್ಯಾನಿಟೈಸರ್ ಖರೀದಿಯಲ್ಲಿ ದೊಡ್ಡ ಮೊತ್ತದ ಅವ್ಯವಹಾರ ನಡೆದಿದೆ. ಮುಂದಿನ ದಿನಗಳಲ್ಲಿ ಜನರಿಗೆ ಈ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ಸಲೀಂ ಅಹಮದ್ ಹೇಳಿದರು.
ಆಡಳಿತ ಮಂಡಳಿ ಮುಂದುವರಿಯಲಿ: ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಮುಕ್ತಾಯವಾಗುತ್ತಿದ್ದು, ಚುನಾವಣೆ ನಡೆಸಲು ಸಾಧ್ಯವಾಗದಿದ್ದರೆ ಇರುವ ಆಡಳಿತ ಮಂಡಳಿಯನ್ನೇ ಆರು ತಿಂಗಳು ಮುಂದುವರಿಸಬೇಕು ಎಂದು ಅವರು ನುಡಿದರು.
ಅಧ್ಯಕ್ಷರ ಪದಗ್ರಹಣ: ಕಳೆದ ಮಾರ್ಚ್ 11ರಂದು ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆದರೆ, ಕೊರೋನಾ ಸೋಂಕಿನ ಕಾರಣಕ್ಕೆ, ಪದಗ್ರಹಣ ಸಾಧ್ಯವಾಗಿರಲಿಲ್ಲ. ಜೂನ್ 7ರಂದು ಬೆಂಗಳೂರಿನಲ್ಲಿ ಸರಳವಾಗಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಇನ್ನು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪದಗ್ರಹಣ ಸಮಾರಂಭದ ನೇರ ಪ್ರಸಾರಕ್ಕೆ ಝೂಮ್ ಆ್ಯಪ್ ಮೂಲಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರಾಜ್ಯದ 8 ಸಾವಿರ ಸ್ಥಳಗಳಲ್ಲಿ ನೇರ ಪ್ರಸಾರವಾಗಲಿದೆ ಎಂದು ಸಲೀಂ ಅಹಮದ್ ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್, ಕೆಪಿಸಿಸಿ ಮುಖಂಡ ಮಿಟ್ಟು ಚೆಂಗಪ್ಪ, ವೀಕ್ಷಕಿ ಮಂಜುಳಾರಾಜ್, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಟಿ.ಪಿ.ರಮೇಶ್, ಚಂದ್ರಕಲಾ, ಚಂದ್ರಮೌಳಿ ಹಾಜರಿದ್ದರು.