ಸಹಕಾರ ಸಂಘದಿಂದ ಸಾಲ ವಿತರಣೆ : ಸರ್ಕಾರದ ನಿರ್ದೇಶನದಂತೆ ಕ್ರಮವಹಿಸಿ : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ

ಮಡಿಕೇರಿ ಮೇ.29 : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ನ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ, ಸಹಕಾರ ಸಂಘಗಳ ಉಪ ನಿಬಂಧಕರಾದ ಬಿ.ಕೆ.ಸಲೀಂ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕಿನ ಅಧಿಕಾರಿಗಳ ಉಪಸ್ಥಿತಿಯಲ್ಲಿ ಇತ್ತೀಚಿನ ರಿಸರ್ವ ಬ್ಯಾಂಕಿನ ಆದೇಶ ಹಾಗೂ ರಾಜ್ಯ ಸರ್ಕಾರದ ಸುತ್ತೋಲೆಯ ಕುರಿತಂತೆ ಚರ್ಚೆ ನಡೆಸಲಾಯಿತು.
2020-21 ನೇ ಸಾಲಿನಲ್ಲಿ ಸಹಕಾರ ಸಂಸ್ಥೆಗಳು ಹಾಗೂ ಬ್ಯಾಂಕುಗಳಿಂದ ಕೃಷಿ ಸಾಲ ವಿತರಿಸುವ ಕುರಿತಂತೆ ಸರ್ಕಾರದ ನೂತನ ನಿಯಮಾವಳಿಯ ಪ್ರಕಾರ ಸಾಲ ವಿತರಿಸಲು ಜಿಲ್ಲಾಧಿಕಾರಿ ಅವರು ಸೂಚಿಸಿದರು.
2019-20 ನೇ ಸಾಲಿನ ರಾಜ್ಯದ ರೈತರಿಗೆ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ನೀಡಿರುವ ನಿವ್ವಳ ಶೂನ್ಯ ಬಡ್ಡಿ ದರ ಅನ್ವಯವಾಗುವಂತೆ ಗರಿಷ್ಠ ರೂ.3 ಲಕ್ಷಗಳ ವರೆಗಿನ ಸಾಲವನ್ನು ಮೇ 31 ರೊಳಗೆ ಮರು ಪಾವತಿಸದಿದ್ದರೆ, ಕೇಂದ್ರ ಸರ್ಕಾರದ ಶೇ.3 ರ ಪೆÇ್ರೀತ್ಸಾಹ ಧನ ಮತ್ತು ಶೇ.2 ರ ಸಬ್ವೆನ್ಸನ್ ದೊರೆಯದೇ ಇರುವುದಾಗಿ ನಬಾರ್ಡ್ ಸುತ್ತೋಲೆಯಲ್ಲಿ ತಿಳಿಸಿದ್ದು, ರಿಸರ್ವ ಬ್ಯಾಂಕಿನ ಹೊಸ ಆದೇಶದ ಸುತ್ತೋಲೆಯಂತೆ ಸಾಲ ಮುಂದೂಡಿಕೆಗೆ ಸಂಬಂಧಿಸಿದಂತೆ ಹೊಸ ಆದೇಶವನ್ನು ನಿರೀಕ್ಷಿಸಲಾಗಿದೆ. ಈ ಕುರಿತಂತೆ ಇರುವ ಗೊಂದಲಗಳ ಬಗ್ಗೆ ಈಗಾಗಲೇ ಜಿಲ್ಲಾ ಅಗ್ರಣೀ ಬ್ಯಾಂಕ್ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಮತ್ತು ನಬಾರ್ಡ್ ಸಂಸ್ಥೆಯ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ ಸಧ್ಯದಲ್ಲಿಯೇ ಸಂಬಂಧಪಟ್ಟವರಿಂದ ಉತ್ತರ ನಿರೀಕ್ಷಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ರಿಸರ್ವ್ ಬ್ಯಾಂಕಿನ ಇತ್ತೀಚಿನ ಸುತ್ತೋಲೆಯಂತೆ ಸಾಲಗಳ ಮುಂದೂಡಲ್ಪಡುವ ಪ್ರಕ್ರಿಯೆಯು 2020 ರ ಆಗಸ್ಟ್ ತಿಂಗಳ ಕೊನೆಯವರೆಗೆ ಉತ್ಪಾದಕ ಸಾಲಗಳಿಗೆ ಅನ್ವಯಿಸುವಂತೆ ಅವಧಿಯನ್ನು ವಿಸ್ತರಿಸಲಾಗಿದೆ. ಈ ಬಗ್ಗೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಗ್ರಾಮೀಣ ಬ್ಯಾಂಕುಗಳು ಈಗಾಗಲೇ ತಮ್ಮೆಲ್ಲಾ ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸುವುದರ ಮೂಲಕ ಈ ಸೌಲಭ್ಯವನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಜಿಲ್ಲೆಯ ರೈತರಿಗೆ ಸಾಲ ವಿತರಿಸುವಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜೊತೆಗೆ ರಿಸರ್ವ್ ಬ್ಯಾಂಕಿನ ಹೊಸ ನಿಯಮದಂತೆ ಮರುಪಾವತಿ ಮುಂದೂಡಲ್ಪಡುವ ದಿನಾಂಕ (31.08.2020) ದ ವರೆಗೆ ಹೊಸ ನಿಯಮಗಳ ಬಗ್ಗೆ ಗೊಂದಲವಿದ್ದಲ್ಲಿ ಸರ್ಕಾರಕ್ಕೆ ಪತ್ರ ಬರೆದು ಪರಿಹರಿಸಿಕೊಳ್ಳಲು ಉಪ ನಿಬಂಧಕರಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.