ಮೇ 31 ರಂದು ವಿಶ್ವ ತಂಬಾಕು ರಹಿತ ದಿನಾಚರಣೆ : ತಂಬಾಕು ಸೇವನೆಯಿಂದ ದೂರವಿರಲು ಡಾ.ಎಂ.ಶಿವಕುಮಾರ ಸಲಹೆ

29/05/2020

ಮಡಿಕೇರಿ ಮೇ.29 :-ಹಲವು ದಶಕಗಳಿಂದ ತಂಬಾಕು ಸೇವನೆ ಎಡಬಿಡದೆ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದೆ. ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಯುವ ಜನತೆ ಈ ವ್ಯಸನಕ್ಕೆ ಬಲಿಯಾಗಿ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ತಂಬಾಕು ಸೇವನೆಯಿಂದ ಆಗುವಂತಹ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ತಂಬಾಕಿನಿಂದ ದೂರವಾಗುತ್ತಿಲ್ಲ.
ತಂಬಾಕು ನಮಗೆ ಅಷ್ಟು ಮಾರಕವೇ? ಹೌದು, ಪ್ರತೀ ದಿನ ಉಪಯೋಗಿಸುವಂತಹ ತಂಬಾಕು ಉತ್ಪನ್ನಗಳಲ್ಲಿ ಮಾರಣಾಂತಿಕ ರಾಸಾಯನಿಕ ಪದಾರ್ಥಗಳಾದ ನಿಕೋಟಿನ್, ಟಾರ್, ಸತು, ಅಮೊನಿಯ, ಕಾರ್ಬನ್ ಮಾನಾಕ್ಸೈಡ್, ಹೈಡ್ರೋಜನ್ ಸೈನೆಡ್, ಮೆಂಥಾಲ್, ಅರ್ಸೆನಿಕ್‍ಗಳು ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ.
ವಿಶ್ವದಲ್ಲಿ ಪ್ರತೀ ವರ್ಷ 60 ಲಕ್ಷಕ್ಕಿಂತ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ. ಕರ್ನಾಟಕದ ಅಂಕಿ ಅಂಶಗಳ ಪ್ರಕಾರ ಶೇ.28 ರಷ್ಟು (15 ವರ್ಷಕ್ಕಿಂತ ಮೇಲ್ಪಟ್ಟ) ವ್ಯಕ್ತಿಗಳು ಯಾವುದಾದರೂ ಒಂದು ರೀತಿಯ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುತ್ತಾರೆ. ಶೇ.11.9 ಧೂಮಪಾನಿಗಳಿದ್ದು ಹಾಗೂ ಶೇ.19.4 ಜಗಿಯುವ ತಂಬಾಕುಗಳ ಸೇವನೆ ಮಾಡುತ್ತಾರೆ. ಸರಿಸುಮಾರು 18 ವಯಸ್ಸಿನಲ್ಲಿ ತಂಬಾಕು ಉತ್ಪನ್ನಗಳ ಸೇವನೆಯನ್ನು ಆರಂಭಿಸುವುದಾಗಿ ಅಂದಾಜಿಸಲಾಗಿದೆ. ಶೇ.42 ರಷ್ಟು ಜನ ಕೆಲಸದ ಸ್ಥಳದಲ್ಲಿ, ಶೇ.44.30 ರಷ್ಟು ಮನೆಯಲ್ಲಿ ಮತ್ತು ಶೇ.37.2 ರಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರಿಂದ ಇತರರು ಪರೋಕ್ಷ ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು ತಂಬಾಕು ಸಾಂಕ್ರಾಮಿಕ ಮತ್ತು ಅದು ಉಂಟುಮಾಡುವ ಸಾವು ಹಾಗೂ ರೋಗದ ಬಗ್ಗೆ ಜಾಗತೀಕ ಗಮನ ಸೆಳೆಯಲು 1987 ರಿಂದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಆಚರಿಸುತ್ತಾ ಬರುತ್ತಿದೆ. ತಂಬಾಕು ಬಳಕೆಯು ವ್ಯಾಪಕ ಹರಡುವಿಕೆ ಮತ್ತು ಋಣಾತ್ಮಕ ಪರಿಣಾಮಗಳತ್ತ ಗಮನ ಸೆಳೆಯಲು ಈ ದಿನವನ್ನು ಆಚರಿಸಲು ಉದ್ದೇಶಿಸಲಾಗಿದೆ.
ಪ್ರತೀ ವರ್ಷ ಮೇ, 31 ರಂದು ವಿಶ್ವದಾದ್ಯಂತ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದೆ. ಈ ವಾರ್ಷಿಕ ಆಚರಣೆ ವಿಷಯ ಪ್ರೊಟೆಕ್ಟಿಂಗ್ ಯೂತ್ ಪ್ರಮ್ ಇಂಡಸ್ಟ್ರೀ ಮ್ಯಾನಿಪ್ಯುಲೇಷನ್ ಅಂಡ್ ಪ್ರಿವೆಂಟಿಂಗ್ ದೆಮ್ ಪ್ರಮ್ ಟೊಬೆಕೊ ಅಂಡ್ ನಿಕೋಟಿನ್ ಅಸ್. ಈ ವರ್ಷದ ವಿಷಯವೇ ಹೇಳುವಂತೆ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಯುವಜನತೆ ತಂಬಾಕು ಉತ್ಪನ್ನಗಳನ್ನು ಉಪಯೋಗಿಸುವುದನ್ನು ತಡೆಗಟ್ಟಿ ರಕ್ಷಿಸುವುದು ಪ್ರಮುಖ ಉದ್ದೇಶವಾಗಿದೆ. ಪ್ರಸ್ತುತವಾಗಿ ಇಡಿ ವಿಶ್ವವನ್ನೇ ಬೆನ್ನುಬಿಡದೆ ಕಾಡುತ್ತಿರುವಂತಹ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದಕ್ಕೆ ತಂಬಾಕು ವ್ಯಸನವು ಪ್ರಮುಖ ಕಾರಣವಾಗಿದೆ.
ತಂಬಾಕು ಉತ್ಪನ್ನ ಸೇವನೆಯಿಂದ ಬಾಯಿಯ ಲಾಲಾರಸ ಮತ್ತು ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ಕೋವಿಡ್ ಶೀಘ್ರ ದಾಳಿಗೆ ದಾರಿ ಮಾಡುತ್ತದೆ ಹಾಗೂ ಜಗಿಯುವ ತಂಬಾಕು ಉತ್ಪನ್ನಗಳ ಸೇವನೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಕೋವಿಡ್‍ನಂತಹ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡಲು ಎಡೆ ಮಾಡಿಕೊಡುತ್ತದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಅಧಿಕಾರಿ ಡಾ.ಎಂ.ಶಿವಕುಮಾರ ಅವರು ತಿಳಿಸಿದ್ದಾರೆ.