ಸಂತ್ರಸ್ತರಿಗೆ ಜೂ.4 ರಂದು ಮನೆಗಳ ಹಸ್ತಾಂತರ : ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ

29/05/2020

ಮಡಿಕೇರಿ ಮೇ 29 : ಜಂಬೂರು ಮತ್ತು ಮದೆ ಗ್ರಾಮದ ಬಳಿ ಸಂತ್ರಸ್ತರಿಗೆ ನಿರ್ಮಿಸಿರುವ ಮನೆ ಹಸ್ತಾಂತರ ಕಾರ್ಯವು ಜೂನ್, 4 ರಂದು ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಸಂತ್ರಸ್ತರಿಗೆ ನಿರ್ಮಿಸಿರುವ ಮನೆ ಹಸ್ತಾಂತರ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಂಬೂರು ಮತ್ತು ಮದೆ ಬಳಿ ನಿರ್ಮಿಸಿರುವ ಮನೆಗಳನ್ನು ಜೂನ್ 4 ರಂದು ಜಿಲ್ಲಾ ಉಸ್ತುವಾರಿ ಸಚಿವರು ಹಸ್ತಾಂತರಿಸಲಿದ್ದಾರೆ. ಹಾಗೆಯೇ ಕಂದಾಯ ಮತ್ತು ಗೃಹ ಸಚಿವರು ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಮನೆ ಹಸ್ತಾಂತರ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಸಾಂಕೇತಿಕವಾಗಿ ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ. ಜೂ.1 ರಿಂದ ಮುಂಗಾರು ಪ್ರವೇಶವಾಗುವ ಹಿನ್ನೆಲೆ ಮನೆ ಹಸ್ತಾಂತರ ಕಾರ್ಯಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಿರ್ದೇಶನ ನೀಡಿದರು.
ಜಂಬೂರು-ಮಾದಾಪುರ ರಸ್ತೆ ಹಾಗೂ ಮದೆನಾಡು ರಸ್ತೆಯನ್ನು ಸರಿಪಡಿಸಬೇಕು. ಮನೆ ಪಟ್ಟಿಯನ್ನು ಕೂಡಲೇ ಒದಗಿಸಬೇಕು. ಶಿಷ್ಟಾಚಾರದಂತೆ ಆಹ್ವಾನ ಪತ್ರ ಮುದ್ರಿಸುವುದು ಮತ್ತಿತರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ.ಸುಮನ್ ಅವರು ಮನೆ ಹಸ್ತಾಂತರ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತಿತರ ಬಗ್ಗೆ ಹಲವು ಮಾಹಿತಿ ನೀಡಿದರು.
ರಾಜೀವ್ ಗಾಂಧಿ ವಸತಿ ನಿಗಮದ ಎಂಜಿನಿಯರ್ ಶ್ರೀನಿವಾಸ್ ಅವರು ಜಂಬೂರಿನಲ್ಲಿ 383, ಮದೆ ಗ್ರಾಮದಲ್ಲಿ 80 ಒಟ್ಟು 463 ಮನೆಗಳು ಹಸ್ತಾಂತರಕ್ಕೆ ಸಿದ್ಧವಾಗಿದೆ. ಮನೆ ಹಸ್ತಾಂತರ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮದನ್ ಮೋಹನ್, ಜಿ.ಪಂ. ಎಂಜಿನಿಯರ್ ಶ್ರೀಕಂಠಯ್ಯ, ಪೌರಾಯುಕ್ತರಾದ ಎಂ.ಎಲ್.ರಮೇಶ್, ಭೂ ದಾಖಲೆ ಉಪ ನಿರ್ದೇಶಕರಾದ ಶ್ರೀನಿವಾಸ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಡಾ.ಎಸ್.ಎಚ್.ಮಹೇಶ್, ಸಿ.ಜಗನ್ನಾಥ್, ತಾ.ಪಂ.ಇಒ ಲಕ್ಷ್ಮೀ, ಸುನಿಲ್ ಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರೇಷ್ಮ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ, ತಹಶೀಲ್ದಾರ್ ಮಹೇಶ್, ಗೋವಿಂದರಾಜು, ಪ.ಪಂ.ಮುಖ್ಯಾಧಿಕಾರಿ ಸುಜಯ್, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎಂ.ಕೆ.ಸ್ವಾಮಿ ಇತರರು ಹಾಜರಿದ್ದರು.