ಲಾಕ್ ಡೌನ್ ಮುಂದುವರಿಕೆ ಪ್ರಸ್ತಾಪ !

30/05/2020

ನವದೆಹಲಿ ಮೇ 29 : ಮೇ 31 ರ ನಂತರವೂ ಲಾಕ್ ಡೌನ್ ನ್ನು ಮುಂದುವರಿಸಬೇಕೆ ಎಂಬ ಬಗ್ಗೆ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ದೂರವಾಣಿ ಮೂಲಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಅಮಿತ್ ಶಾ ಮಾತುಕತೆ ನಡೆಸಿದ್ದು, ಲಾಕ್ ಡೌನ್ ಮುಂದುವರಿಕೆ ಸಂಬಂಧ ಸಂಗ್ರಹಿಸಿರುವ ಅಭಿಪ್ರಾಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸಿದ್ದಾರೆ.
ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ಕೊರೋನಾ ವೈರಸ್ ತಡೆಗೆ ರಾಷ್ಟ್ರಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿದ್ದರು. ಈ ಲಾಕ್ ಡೌನ್ ಮೇ.31 ವರೆಗೂ ನಾಲ್ಕು ಭಾಗಗಳಲ್ಲಿ ಮುಂದುವರೆದಿದೆ.
ಮೇ.31ಕ್ಕೆ 4.0 ಹಂತದ ಲಾಕ್ ಡೌನ್ ಮುಕ್ತಾಯಗೊಳ್ಳಲಿದ್ದು, ಇದಕ್ಕೂ 3 ದಿನಗಳ ಮುನ್ನ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಜೂ.1 ರಿಂದ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಬೇಕಾದ ವಲಯಗಳು, ಆತಂಕ ಇರುವ ಕ್ಷೇತ್ರಗಳ ಬಗ್ಗೆ ರಾಜ್ಯಗಳ ಮುಖ್ಯಮಂತ್ರಿಗಳಿಂದ ಮಾಹಿತಿ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿರುವ ಅಮಿತ್ ಶಾ ಈ ಕುರಿತ ವರದಿಯನ್ನು ತಲುಪಿಸಿದ್ದಾರೆ.