ಬಡವರ ಕೈಗೆ ನೇರವಾಗಿ ಸಿಗಲಿದೆ ಹಣ

30/05/2020

ನವದೆಹಲಿ ಮೇ 29 : ದೇಶದಲ್ಲಿ ಮಾರಕ ಕೊರೋನಾ ವೈರಸ್ ಬಿಕ್ಕಟ್ಟು ಉಲ್ಬಣಿಸಿದರೆ ದೇಶದ ಬಡವರ ಕೈಗೇ ನೇರವಾಗಿ ಹಣ ನೀಡುವ ವ್ಯವಸ್ಥೆಯ ಕುರಿತು ಆಲೋಚಿಸಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.
ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ದೇಶದ ಕೋಟ್ಯಂತರ ಬಡವರು, ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಅಕ್ಷರಶಃ ನಿರಾಶ್ರಿತರಾಗಿದ್ದರು. ಒಪ್ಪೊತ್ತಿನ ಊಟವೂ ಇಲ್ಲದೆ ಕಂಗಾಲಾಗಿದ್ದರು. ಅಲ್ಲದೆ ತಮ್ಮ ತಮ್ಮ ತವರಿಗೆ ತೆರಳಲು ಈಗಲೂ ಹೆಣಗಾಡುತ್ತಿದ್ದಾರೆ. ಕೋವಿಡ್ 19 ಸಾಂಕ್ರಾಮಿಕ ಲಾಕ್ ಡೌನ್ ನಿಂದಾಗಿ ಸಮಾಜದ ಈ ವರ್ಗ ಬೀದಿಗೆ ಬಿದ್ದಿತ್ತು. ಅವರ ನಿತ್ಯ ಸಂಪಾದನೆ ಸ್ಥಗಿತವಾಗಿತ್ತು. ಕುಟುಂಬ ಪೋಷಣೆ ಕಷ್ಟಕರವಾಗಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿತ್ತು. ಆದರೆ ಈ ಆರ್ಥಿಕ ಪ್ಯಾಕೇಜ್ ಸಂಪೂರ್ಣವಾಗಿ ಸಂತ್ರಸ್ಥರ ಕೈ ಗೆ ತಲುಪುತ್ತಿಲ್ಲ.
ಹೀಗಾಗಿ ಕೇಂದ್ರ ವಿತ್ತ ಸಚಿವಾಲಯ ದೇಶದ ಬಡವರ ಕೈಗೇ ನೇರವಾಗಿ ಹಣ ನೀಡುವ ವ್ಯವಸ್ಥೆಯ ಕುರಿತು ಆಲೋಚಿಸುತ್ತಿದೆ ಎನ್ನಲಾಗಿದೆ. ವಿತ್ತ ಸಚಿವಾಲಯದ ಮೂಲಗಳು ತಿಳಿಸಿರುವಂತೆ ಕೇಂದ್ರ ವಿತ್ತ ಸಚಿವಾಲಯ ಕಾರ್ಮಿಕ ಸಚಿವಾಲಯದಿಂದ ಲಾಕ್ ಡೌನ್ ಸಂದರ್ಭದಲ್ಲಿ ಉಂಟಾದ ಉದ್ಯೋಗ ನಷ್ಟ ಮತ್ತು ವೇತನ ಕಡಿತದ ದತ್ತಾಂಶ ಕೇಳಿದೆ. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಮುದ್ರಣಗೊಂಡ ನೋಟುಗಳನ್ನು ಚಲಾವಣೆಗೆ ತರುವ ಚಿಂತನೆಯಲ್ಲಿ ತೊಡಗಿದೆ ಎಂದು ಮಾಹಿತಿ ನೀಡಿವೆ.