ವಲಸೆ ಕಾರ್ಮಿಕನ ಕೊಳೆತ ಶವ ಪತ್ತೆ

May 30, 2020

ಲಖನೌ ಮೇ 29 : ಲಾಕ್ ಡೌನ್ ನಿಂದಾಗಿ ವಿವಿಧ ನಗರಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರ ಪ್ರಯಾಣಕ್ಕಾಗಿ ಕೇಂದ್ರ ಸರ್ಕಾರ ಆರಂಭಿಸಿದ್ದ ಶ್ರಮಿಕ್ ವಿಶೇಷ ರೈಲಿನ ಶೌಚಾಲಯದಲ್ಲಿ ವಲಸೆ ಕಾರ್ಮಿಕನ ಕೊಳೆತ ಶವ ಪತ್ತೆಯಾಗಿದ್ದು, ಹಲವು ದಿನಗಳ ಹಿಂದೆಯೇ ಕಾರ್ಮಿಕ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಉತ್ತರ ಪ್ರದೇಶದ ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಸಂಜೆ ರೈಲು ಬೋಗಿಯನ್ನು ಸ್ಯಾನಿಟೈಸ್ ಮಾಡಲು ಬಂದಿದ್ದ ಸ್ವಚ್ಛತಾ ಸಿಬ್ಬಂದಿ ಶವ ಕಂಡು ದಂಗಾಗಿದ್ದಾರೆ.
ಮೃತ ವ್ಯಕ್ತಿ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಮೋಹನ್‍ಲಾಲ್ ಶರ್ಮಾ(38) ಎಂದು ಗುರುತಿಸಲಾಗಿದ್ದು, ಮುಂಬೈನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ನಂತರ ಮರಳಿ ತನ್ನ ತವರು ರಾಜ್ಯ ಉತ್ತರ ಪ್ರದೇಶಕ್ಕೆ ಆಗಮಿಸುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಶ್ರಮಿಕ್ ವಿಶೇಷ ರೈಲಿನ ಮೂಲಕ ಝಾನ್ಸಿ ತಲುಪಿದ್ದ ಮನೋಹರ್‍ಲಾಲ್ ಶರ್ಮಾ, ಅಲ್ಲಿಂದ ಬಸ್ತಿಗೆ ಮತ್ತೊಂದು ರೈಲಿನಲ್ಲಿ ಹೊರಡಬೇಕಿತ್ತು. ಆದರೆ ಝಾನ್ಸಿ ರೈಲು ನಿಲ್ದಾಣ ಬರುವುದಕ್ಕೂ ಮುಂಚೆ ಶೌಚಾಲಯಕ್ಕೆ ತೆರಳಿದ್ದಾಗ ಆತ ಮೃತಪಟ್ಟಿದ್ದಾನೆ.