ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ : ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಲು ಎಸ್ಪಿ ಡಾ. ಸುಮನ್ ಡಿ. ಪೆನ್ನೇಕರ್ ಸಲಹೆ

30/05/2020

ಮಡಿಕೇರಿ ಮೇ 30 : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಂದು ಸಾವಿರದ ಐದು ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕೊಡಗು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶವಿದ್ದು, ಆಸಕ್ತರು ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ತಮ್ಮ ಹೆಸರನ್ನು ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಸಲಹೆ ನೀಡಿದ್ದಾರೆ.
ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಅಂಕಪಟ್ಟಿಯೊಂದಿಗೆ ಗ್ರಾಮೀಣ ದೃಢೀಕರಣ, ಕನ್ನಡದಲ್ಲಿ ಶಿಕ್ಷಣ ಪಡೆದ ದೃಡೀಕರಣದೊಂದಿಗೆ ಜಾತಿಪತ್ರ, ಭಾವಚಿತ್ರ, ಆಧಾರ ಕಾರ್ಡ್ ಹಾಗೂ ಪಿಡಿಪಿ ಸರ್ಟಿಫಿಕೇಟ್ ಮತ್ತು ಮೊಬೈಲ್ ಸಂಖ್ಯೆ ಸಹಿತ ಅರ್ಜಿ ಸಲ್ಲಿಸುವಂತೆ ವಿವರಿಸಿದ್ದಾರೆ.

ಪ್ರೊಬೆಷನರಿ ಠಾಣಾಧಿಕಾರಿಗಳು :
ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 14 ಮಂದಿ ಪ್ರೊಬೆಷನರಿ ಪೊಲೀಸ್ ಉಪ ನಿರೀಕ್ಷಕರು ಕರ್ತವ್ಯಕ್ಕೆ ಆಗಮಿಸಿದ್ದು, ಎಲ್ಲ ಠಾಣೆಗಳಿಗೆ ಠಾಣಾಧಿಕಾರಿಗಳನ್ನು ಸರಕಾರ ಭರ್ತಿಗೊಳಿಸಿದೆ ಎಂದು ಎಸ್‍ಪಿ ನೆನಪಿಸಿದರು. ಮಡಿಕೇರಿ ನಗರ ಠಾಣೆ, ನಾಪೋಕ್ಲು, ಸಿದ್ದಾಪುರ, ಕುಶಾಲನಗರಕ್ಕೆ ಇತ್ತೀಚಿಗೆ ನೂತನ ಠಾಣಾಧಿಕಾರಿಗಳನ್ನು ನೇಮಿಸಿದ್ದು, ಮುಂದಿನ ದಿನಗಳಲ್ಲಿ ಪೊಲೀಸ್ ಸಿಬ್ಬಂದಿಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.