ಮಡಿಕೇರಿ ಆಹಾರ ದಾಸ್ತಾನು ಗೋದಾಮಿಗೆ ಆಹಾರ ಸಚಿವರ ಭೇಟಿ

30/05/2020

ಮಡಿಕೇರಿ ಮೇ 30 : ಆಹಾರ, ನಾಗರೀಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರಾದ ಕೆ.ಗೋಪಾಲಯ್ಯ ಅವರು ನಗರದ ಎಪಿಎಂಸಿ ಆವರಣದಲ್ಲಿರುವ ಆಹಾರ ದಾಸ್ತಾನು ಗೋದಾಮಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಇದೇ ವೇಳೆ ಗೋದಾಮಿನಲ್ಲಿ ದಾಸ್ತಾನು ಇರುವ ಅಕ್ಕಿ, ಗೋಧಿ ಮತ್ತು ಬೇಳೆ ಕುರಿತು ಅಧಿಕಾರಿಗಳಿಂದ ಸಚಿವರು ಮಾಹಿತಿಯನ್ನು ಪಡೆದರು.
ಖುದ್ದು ಸಚಿವರೇ ಅಕ್ಕಿ, ಬೇಳೆ ಮತ್ತು ಗೋಧಿಯ ಗುಣಮಟ್ಟವನ್ನು ಪರಿಶೀಲಿಸಿದರು. ಇದೇ ವೇಳೆ ನಗರದ ನ್ಯಾಯ ಬೆಲೆ ಅಂಗಡಿಗಳಿಗೂ ಸಚಿವರು ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಗಳನ್ನು ಪರಿಶೀಲಿಸಿದರು.
ವಲಸೆ ಕಾರ್ಮಿಕರಿಗೆ ಪಡಿತರ ವಿತರಣೆ: ಜನತಾ ಬಜಾರ್‍ನ ಪಡಿತರ ವಿತರಣಾ ಕೇಂದ್ರದಲ್ಲಿ ಹೊರ ರಾಜ್ಯದ ವಲಸೆ ಕಾರ್ಮಿಕರಿಗೆ ಪಡಿತರ ವಿತರಣೆಯನ್ನು ಪರಿಶೀಲಿಸಿದ ಆಹಾರ ಸಚಿವರು ಸಾಂಕೇತಿಕವಾಗಿ ಪಡಿತರ ವಿತರಿಸಿದರು.
ಸಮರ್ಪಕ ರೀತಿಯಲ್ಲಿ ಆಹಾರ ಧಾನ್ಯಗಳನ್ನು ಸಾರ್ವಜನಿಕರಿಗೆ ಪೂರೈಸಬೇಕು. ಹಾಗೆಯೇ ಆಹಾರ ಪದಾರ್ಥಗಳ ಗುಣಮಟ್ಟ ಕಾಯ್ದುಕೊಂಡು ಉತ್ತಮ ಆಹಾರ ಪದಾರ್ಥಗಳನ್ನು ಜನರಿಗೆ ವಿತರಿಸುವಂತೆ ಅವರು ಸೂಚಿಸಿದರು. ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಾಹರಗಳ ಇಲಾಖೆಯ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ, ಕೆಎಸ್‍ಎಫ್‍ಸಿ ಜಿಲ್ಲಾ ವ್ಯವಸ್ಥಾಪಕರಾದ ಶಿವಮಾದು, ಮಡಿಕೇರಿ ಆಹಾರ ಗೋದಾಮು ವ್ಯವಸ್ಥಾಪಕರಾದ ಪುಟ್ಟಪ್ಪ ಇತರರು ಹಾಜರಿದ್ದರು.