ಕೊಡಗು ತೊರೆದು ಸ್ವಂತ ಊರುಗಳಿಗೆ ತೆರಳಿದ 5984 ವಲಸೆ ಕಾರ್ಮಿಕರು

31/05/2020

ಮಡಿಕೇರಿ ಮೇ 31 : ಬಹುತೇಕ ಬದುಕಿಗೆ ನೆಲೆ ಕಂಡುಕೊಳ್ಳುವ ಪ್ರಮುಖ ಉದ್ದೇಶಗಳ ಹಿನ್ನೆಲೆಯಲ್ಲಿ ಕೆಲಸ ಅರಸಿಕೊಂಡು ಕೊಡಗಿನ ಕಾಫಿ ತೋಟ ಸೇರಿದಂತೆ ವಿವಿಧೆಡೆಗಳಲ್ಲಿ ನೆಲೆಸಿದ್ದ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ 5984 ಮಂದಿ, ಕೊರೊನಾ ಲಾಕ್ ಡೌನ್ ಸಡಿಲಿಕೆಯ ಬೆನ್ನಲ್ಲೆ ಜಿಲ್ಲಾಡಳಿತದ ನೆರವಿನೊಂದಿಗೆ ತಮ್ಮ ಊರುಗಳಿಗೆ ಮರಳಿದ್ದಾರೆ.
ಪ್ರಸಕ್ತ ಸಾಲಿನ ಮಾರ್ಚ್‍ನಲ್ಲಿ ಕೊರೊನಾ ಸೋಂಕಿನ ತಡೆಗೆ ಇಡೀ ದೇಶ ಲಾಕ್ ಡೌನ್‍ಗೆ ಒಳಗಾದ ಸಂದರ್ಭ ವಿವಿಧೆಡೆಗಳಂತೆ ಕೊಡಗು ಜಿಲ್ಲೆಯಲ್ಲಿಯೂ ವಲಸೆ ಕಾರ್ಮಿಕರು, ಯಾತ್ರಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಸಿಲುಕಿಕೊಂಡು ಸಂಕಷ್ಟಕ್ಕೆ ಒಳಗಾಗಿದ್ದರು.
ಕೊರೊನಾ ಸಂಕಷ್ಟಗಳ ನಡುವೆಯೇ ಆಯಾ ಪ್ರದೇಶಗಳಲ್ಲಿ ಸಿಲುಕಿರುವ ಹೊರ ಜಿಲ್ಲೆÉ, ರಾಜ್ಯದ ಮಂದಿಯನ್ನು ಅವರವರ ಊರುಗಳಿಗೆ ಕಳುಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಒಳಾಡಳಿತ ಇಲಾಖೆ ಆದೇಶವನ್ನು ಹೊರಡಿಸಿತ್ತಾದರೆ, ಕರ್ನಾಟಕ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ಹಿನ್ನೆಲೆ ತಮ್ಮದಲ್ಲದ ಊರಿನಲ್ಲಿ ಸಿಲುಕಿಕೊಂಡಿದ್ದ ಸಹಸ್ರಾರು ಮಂದಿ ತಮ್ಮೂರುಗಳತ್ತ ತೆರಳಲಾರಂಭಿಸಿದ್ದಾರೆ. ಈ ಪ್ರಕ್ರಿಯೆ ದೇಶ ವ್ಯಾಪಿ ನಡೆಯುತ್ತಿದ್ದು, ಕೊಡಗಿನಲ್ಲೂ ನಡೆಯುತ್ತಿದೆ.
ಜಿಲ್ಲೆÉಯಲ್ಲಿ ಸಿಲುಕಿದ್ದ ರಾಜ್ಯ ಮತ್ತು ದೇಶದ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಊರುಗಳಿಗೆ ಸರ್ಕಾರದಿಂದ ವ್ಯವಸ್ಥೆ ಮಾಡಲಾದ ಬಸ್‍ಗಳ ಮೂಲಕ, ಶ್ರಮಿಕ್ ವಿಶೇಷ ವಿಶೇಷ ರೈಲುಗಳ ಮೂಲಕ ಕಳುಹಿಸಿಕೊಡಲಾಗುತ್ತಿದೆ.
ಇದುವರೆಗೆ ಜಿಲ್ಲೆಯಿಂದ 1463 ಮಂದಿಯನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದ್ದರೆ, ತಮಿಳುನಾಡಿಗೆ 3082, ಅಸ್ಸಾಂಗೆ 204, ಪಶ್ಚಿಮ ಬಂಗಾಳಕ್ಕೆ 477, ಒಡಿಸ್ಸಾಕ್ಕೆ 32, ಮೇಘಾಲಯಕ್ಕೆ 8, ಬಿಹಾರ 239, ಉತ್ತರ ಪ್ರದೇಶ 270, ಜಾರ್ಖಂಡ್‍ಗೆ 209 ಮಂದಿಯನ್ನು ಕಳುಹಿಸಿಕೊಡಲಾಗಿದೆ. ಇಂದು ಅಸ್ಸಾಂ ರಾಜ್ಯದ 204 ಮಂದಿಯನ್ನು ಸವರವರ ಸ್ವಂತ ಊರುಗಳಿಗೆ ಮೈಸೂರಿನಿಂದ ತೆರಳಿದ ವಿಶೇಷ ಶ್ರಮಿಕ್ ರೈಲಿನ ಮೂಲಕ ಕಳುಹಿಸಿಕೊಡಲಾಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಲಾಕ್ ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಿಕೊಡುವ ಕಾರ್ಯ ಬಹುತೇಕ ಪೂರ್ಣ ಗೊಂಡಿರುವುದಾಗಿ ಜಿಲ್ಲಾಡಳಿತ ಮಾಹಿತಿ ಒದಗಿಸಿದೆ.