ನೇಪಾಳದ ನಕ್ಷೆಯಲ್ಲಿ ಭಾರತದ ಭಾಗ

ಕಠ್ಮಂಡು ಮೇ 31 : ಭಾರತದ ಮಿತ್ರ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದ ನೆರೆಯ ನೇಪಾಳ ಇದೀಗ ಭಾರತದ ಭೂಭಾಗದ ಮೇಲೆ ಕಣ್ಣು ಹಾಕಿದ್ದು, ಭಾರತ ಭೂಭಾಗವನ್ನು ತನ್ನ ನಕಾಶೆಯಲ್ಲಿ ಸೇರಿಸುವ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಿದೆ.
ದೇಶದ ನಕ್ಷೆಯನ್ನು ಬದಲಾಯಿಸುವ ಉದ್ದೇಶದೊಂದಿಗೆ ನೇಪಾಳ ಸರ್ಕಾರವು ಭಾನುವಾರ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ಭಾರತದ ಜೊತೆಗಿನ ಗಡಿ ವಿವಾದದ ನಡುವೆಯೇ ನೇಪಾಳ ಸರ್ಕಾರ ಈ ಕ್ರಮಕ್ಕೆ ಮುಂದಾಗಿರುವುದು ಆ ಸರ್ಕಾರದ ಉದ್ಧಟತನವನ್ನು ತೋರಿಸುತ್ತಿದೆ.
ನೇಪಾಳದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶಿವಮಯ ತುಂಬಹಾಂಗ್ಪೆ ಅವರು ನೇಪಾಳ ಸರ್ಕಾರದ ಪರವಾಗಿ ಮಸೂದೆಯನ್ನು ಮಂಡಿಸಿದ್ದು, ನೇಪಾಳ ಸಂವಿಧಾನದ 3ನೇ ಪರಿಚ್ಛೇದದಲ್ಲಿ ಉಲ್ಲೇಖಿಸಲಾಗಿರುವ ಆಡಳಿತಾತ್ಮಕ ನಕಾಶೆ ತಿದ್ದುಪಡಿಗೆ ಸಂಬಂಧಿಸಿದ ಮಸೂದೆ ಇದಾಗಿದೆ. ಇದಕ್ಕೆ ಅನುಮೋದನೆ ದೊರೆತು ಕಾನೂನಾಗಿ ರೂಪುಗೊಂಡರೆ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಪರಿಷ್ಕೃತ ನಕಾಶೆಯನ್ನೇ ಬಳಸಲಾಗುತ್ತದೆ. ಸದ್ಯ ಸಂಸತ್ತಿನಲ್ಲಿ ಮಸೂದೆ ಮೇಲೆ ಚರ್ಚೆ ನಡೆಯಲಿದ್ದು, ಉಭಯ ಸದನಗಳು ಅನುಮೋದನೆ ನೀಡಿದ ನಂತರ ಮಸೂದೆ ರಾಷ್ಟ್ರಪತಿಗಳ ಸಹಿಗಾಗಿ ಕಳುಹಿಸಿಕೊಡಲಾಗುತ್ತದೆ.