ಹೆಚ್.ಎಂ.ನಂದಕುಮಾರ್ ಪ್ರಾಯೋಜಕತ್ವದಲ್ಲಿ ಕಿಟ್ ವಿತರಣೆ

01/06/2020

ಮಡಿಕೇರಿ ಜೂ.1 : ಮಡಿಕೇರಿಯ ಪುಟಾಣಿ ನಗರ ಬಡಾವಣೆಯ ಬಡ ಕೂಲಿ ಕಾರ್ಮಿಕರು ಹಾಗೂ ದಿನಗೂಲಿ ನೌಕರರ ಕುಟುಂಬಗಳಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಖಜಾಂಚಿ ಮತ್ತು ನಗರಸಭಾ ಮಾಜಿ ಅಧ್ಯಕ್ಷ ಹೆಚ್.ಎಂ.ನಂದಕುಮಾರ್ ಅವರ ಪ್ರಾಯೋಜಕತ್ವದಲ್ಲಿ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಕಾಂಗ್ರೆಸ್ ಪಕ್ಷ ನಿರಂತರ ಜನÀಪರವಾಗಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು. ನಂದಕುಮಾರ್ ಅವರು ಬಡ ಕಾರ್ಮಿಕರ ಸಮಸ್ಯೆಗಳನ್ನು ಅರಿತುಕೊಂಡು ನೆರವಿಗೆ ಬಂದಿರುವುದು ಶ್ಲಾಘನೀಯವೆಂದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನೀರ ಮೈನಾ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಮುಖಂಡರಾದ ನಂದಕುಮಾರ್ ಅವರು ಮಾನವೀಯ ಮೌಲ್ಯಗಳ ಮೂಲಕ ಬಡವರ ಪರವಾಗಿ ಕಾರ್ಯ ನಿರ್ವಹಿಸಿ ಮಾದರಿಯಾಗಿದ್ದಾರೆ ಎಂದರು. ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಬಡ ಕುಟುಂಬಗಳಿಗೆ ವೈಯುಕ್ತಿಕ ನೆರವು ನೀಡಲು ಮುಂದೆ ಬರಬೇಕೆಂದು ಕರೆ ನೀಡಿದರು. ಕಳೆದ ಇಪ್ಪತ್ತು ದಿನಗಳಿಂದ ಮಡಿಕೇರಿ ನಗರದ ವಿವಿಧ ವಾರ್ಡ್‍ಗಳ ಸುಮಾರು ಒಂದು ಸಾವಿರ ಬಡ ಕಾರ್ಮಿಕ ಕುಟುಂಬಗಳಿಗೆ ನಂದಕುಮಾರ್ ಅವರು ನೆರವಿನ ಹಸ್ತ ಚಾಚಿದ್ದಾರೆ ಎಂದು ತಿಳಿಸಿದರು.
ಸ್ಥಳೀಯ ನಿವಾಸಿಗಳು ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಒಂದು ಬಾರಿ ಅರ್ಧ ಲೀಟರ್ ಹಾಲು ಪೂರೈಕೆ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ನೆರವು ಸಿಗಲಿಲ್ಲ, ಆದರೆ ಕಾಂಗ್ರೆಸ್ ಮುಖಂಡರು ಮನೆ ಮನೆಗೆ ಕಿಟ್ ವಿತರಣೆ ಮಾಡುವ ಮೂಲಕ ಬಡ ಕುಟುಂಬಗಳಿಗೆ ನೆರವಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುಟಾಣಿ ನಗರದ ಸುಮಾರು ನೂರೈವತ್ತು ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್‍ನ್ನು ಕಾಂಗ್ರೆಸ್ ಮುಖಂಡರು ವಿತರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ನಗರಸಭಾ ಮಾಜಿ ಅಧ್ಯಕ್ಷೆ ಜುಲೇಕಾಬಿ, ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಪ್ರಭುರೈ, ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಜ್ಜಳ್ಳಿ ರವಿ, ಬ್ಲಾಕ್ ಸಂಘಟನಾ ಕಾರ್ಯದರ್ಶಿ ಮುನೀರ್ ಮಾಚರ್, ಯುವ ಕಾಂಗ್ರೆಸ್ ನಗರಾಧ್ಯಕ್ಷ ಮಂಡೀರ ಸದಾ ಮುದ್ದಪ್ಪ, ನಗರ ಕಾಂಗ್ರೆಸ್ ಮುಖಂಡ ರವಿಗೌಡ, ಮಹಿಳಾ ಕಾಂಗ್ರೆಸ್ ಮುಖಂಡರಾದ ಮಿನಾಜ್ ಪ್ರವೀಣ್, ಸ್ವರ್ಣಲತಾ, ಪೂರ್ಣಿಮಾ ಸೇರಿದಂತೆ ಮಡಿಕೇರಿ ಬ್ಲಾಕ್ ಮತ್ತು ನಗರ ಕಾಂಗ್ರೆಸ್ ಪಧಾದಿಕಾರಿಗಳು ಕಿಟ್ ವಿತರಿಸುವ ಸಂದರ್ಭ ಹಾಜರಿದ್ದರು.