ಬಿಳಿಗೇರಿ ಬಳಿ 22 ಮನೆಗಳು ಜೂನ್ ಅಂತ್ಯದೊಳಗೆ ಪೂರ್ಣ: ರಾಜೀವ್ ಗಾಂಧಿ ವಸತಿ ನಿಗಮದ ಯೋಜನಾ ನಿರ್ದೇಶಕ ಎಚ್.ಶ್ರೀನಿವಾಸ್ ಮಾಹಿತಿ

June 1, 2020

ಮಡಿಕೇರಿ ಜೂ.01 : ಜಿಲ್ಲೆಯಲ್ಲಿ 2018ರ ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನ ಹಲವು ಕುಟುಂಬಗಳು ಸಂತ್ರಸ್ತರಾದರು.
ಈ ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಸ್ಥಳ ಗುರುತಿಸಿ ಪ್ರತೀ ಮನೆಗೆ 9.84 ಲಕ್ಷ ರೂ.ವೆಚ್ಚದಲ್ಲಿ ಎರಡು ಬೆಡ್‍ರೂಮ್ ಒಳಗೊಂಡ ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಕರ್ಣಂಗೇರಿಯಲ್ಲಿ ನಿರ್ಮಿಸಲಾಗಿದ್ದ 35 ಮನೆಗಳನ್ನು 2019ರ ಅಕ್ಟೋಬರ್, 25 ರಂದು ಹಸ್ತಾಂತರಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ, ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಹಾಗೂ ಕಂದಾಯ ಸಚಿವರಾದ ಆರ್.ಅಶೋಕ್ ಅವರು ಜಂಬೂರಿನಲ್ಲಿ ನಿರ್ಮಿಸಲಾಗಿರುವ 383 ಮತ್ತು ಮದೆನಾಡು ಬಳಿ ನಿರ್ಮಿಸಿರುವ 80 ಒಟ್ಟು 463 ಮನೆಗಳನ್ನು ಸದ್ಯ ಜೂನ್, 04 ರಂದು ಹಸ್ತಾಂತರಿಸಲಿದ್ದಾರೆ.
ಉಳಿದಂತೆ ಬಿಳಿಗೇರಿ ಬಳಿ 22 ಮನೆಗಳು ನಿರ್ಮಾಣವಾಗುತ್ತಿದ್ದು, ಜೂನ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಹಾಗೆಯೇ ಗಾಳಿಬೀಡು ಗ್ರಾಮದ ಬಳಿ 140 ಮನೆಗಳು ಮತ್ತು ಕೆ.ನಿಡುಗಣೆ ಗ್ರಾಮದ ಬಳಿ 80 ಮನೆಗಳು ನಿರ್ಮಾಣವಾಗುತ್ತಿದ್ದು, ನವೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ರಾಜೀವ್ ಗಾಂಧಿ ವಸತಿ ನಿಗಮದ ಯೋಜನಾ ನಿರ್ದೇಶಕರಾದ ಎಚ್. ಶ್ರೀನಿವಾಸ್ ಅವರು ಮಾಹಿತಿ ನೀಡಿದ್ದಾರೆ.