ಕಾಯ್ದೆ ತಿದ್ದುಪಡಿಗೆ ವಿರೋಧ : ವಿದ್ಯುತ್ ಇಲಾಖೆ ನೌಕರರಿಂದ ಪ್ರತಿಭಟನೆ

02/06/2020

ಮಡಿಕೇರಿ ಜೂ.1 : ಕೇಂದ್ರ ಸರ್ಕಾರವು 2003 ರ ವಿದ್ಯುತ್ ಕಾಯ್ದೆಗೆ ಪ್ರಸ್ತಾಪಿತ ತಿದ್ದುಪಡಿ ತರಲು ಹೊರಟಿರುವುದು ವಿದ್ಯುತ್ ಕ್ಷೇತ್ರದಲ್ಲಿ ಹೊರ ಗುತ್ತಿಗೆ, ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ಇಂದು ವಿದ್ಯುತ್ ಇಲಾಖೆಯ ನೌಕರರು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಅಸೋಸಿಯೇಷನ್ ಗಳ ಒಕ್ಕೂಟದ ವಿರಾಜಪೇಟೆ ಶಾಖೆಯ ಪದಾಧಿಕಾರಿಗಳು ಪಟ್ಟಣದ ಚೆಸ್ಕಾಂ ಕಚೇರಿ ಎದುರು ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಆರ್.ಯೋಗರಾಜ್ ಅವರು ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುತ್ತಿರುವುದು ಖಂಡನೀಯವೆಂದು ತಿಳಿಸಿದರು.
ರಾಜ್ಯದ ಎಲ್ಲಾ ವಿದ್ಯುತ್ ಇಲಾಖಾ ಕಚೇರಿಗಳ ಆವರಣದಲ್ಲಿ ಇಂದು ಸಂಘಟನೆಗಳು ಪ್ರತಿಭಟನೆ ನಡೆಸಿವೆ ಎಂದು ಹೇಳಿದರು.
ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಸುರೇಶ್, ಕಿರಿಯ ಇಂಜಿನಿಯರ್ ಹೆಚ್‍ಎಸ್.ರಮೇಶ್ ಸೇರಿದಂತೆ ಅನೇಕ ಮಂದಿ ನೌಕರರು ಹಾಜರಿದ್ದರು.