ಕೊರೋನಾ ಸೈನಿಕರಿಗೆ ಗೌರವ ಅರ್ಪಿಸಿದ ಧಾರ್ಮಿಕ ಮಂಡಳಿ

02/06/2020

ಮಡಿಕೇರಿ ಜೂ.1 : ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ರಾತ್ರಿ, ಹಗಲೆನ್ನದೆ ಶ್ರಮಿಸುತ್ತಿರುವ ಕೊರೋನಾ ಸೈನಿಕರನ್ನು ಧಾರ್ಮಿಕ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವಿರಾಜಪೇಟೆ ತಾಲ್ಲೂಕಿನ ಅರ್ಜಿ ಪೆರುಂಬಾಡಿ ಗ್ರಾಮದ ಶ್ರೀಅಯ್ಯಪ್ಪ ಭಜನಾ ಮಂದಿರ ಮತ್ತು ಬಾಳುಗೋಡು ಶ್ರೀಅಗ್ನಿ ಚಾಮುಂಡಿ ದೇವಾಲಯದ ಸಂಯುಕ್ತ ಆಶ್ರಯದಲ್ಲಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಭಾಂಗಣದಲ್ಲಿ ಗೌರವಿಸಲಾಯಿತು.
ಸರಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಅಗ್ನಿ ಚಾಮುಂಡಿ ದೇವಾಲಯದ ಅಧ್ಯಕ್ಷ ಕೆ.ಬಿ.ಕಾವೇರಪ್ಪ ಅವರು ಸೋಂಕಿನ ವಿರುದ್ಧ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆ ಶುಶ್ರೂಷಕಿಯರ ಸೇವೆ ಅವಿಸ್ಮರಣೀಯವೆಂದರು. ಇವರುಗಳನ್ನು ಗೌರವಿಸುವುದು ಗ್ರಾಮಸ್ಥರ ಕರ್ತವ್ಯವಾಗಿದೆ ಎಂದು ಹೇಳಿದರು.
ಅರ್ಜಿ ಪಂಚಾಯಿತಿ ಮತ್ತು ಬೆಟೋಳಿ ಪಂಚಾಯಿತಿ ವ್ಯಾಪ್ತಿಯ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆ ಶುಶ್ರೂಷಕಿಯರಿಗೆ ದಿನಬಳಕೆಯ ವಸ್ತುಗಳ ಕಿಟ್ ನೀಡಿ ಗೌರವಿಸಲಾಯಿತು.
ಭಜನಾ ಮಂದಿರದ ಅಧ್ಯಕ್ಷ ಕೆ.ಕೆ.ಅನಿಲ್ ಕುಮಾರ್, ಉಪಾಧ್ಯಕ್ಷ ಗೋವರ್ಧನ, ಬಿ.ಪಿ.ಜೀವನ್, ಕಾರ್ಯದರ್ಶಿ ಸಿ.ಆರ್.ಬಾಬು, ದೇವಾಲಯದ ಉಪಾಧ್ಯಕ್ಷ ಬಿ.ಎಸ್.ರವೀಂದ್ರ, ಕಾರ್ಯದರ್ಶಿ ಟಿ.ಅರ್.ಗಣೇಶ್, ವೇಣು ಎಂ.ಕೆ. ಪಿ.ಆರ್.ಶಿವಪ್ಪ, ರಾಧಾಕೃಷ್ಣ, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.