ವಾರಿಯರ್ಸ್ ಬಗ್ಗೆ ಪ್ರಧಾನಿ ಮೆಚ್ಚುಗೆ

02/06/2020

ನವದೆಹಲಿ ಜೂ.1 : ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಅಗೋಚರವೇ ಆಗಿರಬಹುದು. ಆದರೆ, ಇದರ ವಿರುದ್ಧ ಹೋರಾಟ ಮಾಡುವ ವೈದ್ಯಕೀಯ ಸಿಬ್ಬಂದಿ ನಮಗೆ ಗೋಚರಿಸುತ್ತಾರೆ. ಆದ್ದರಿಂದ ಕೊರೋನಾ ವೈರಸ್ ಗೋಚರ ಮತ್ತು ಅಗೋಚರ ನಡುವಿನ ಯುದ್ಧ ಇದ್ದ ಹಾಗೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.
ದೇಶದಲ್ಲಿಯೇ ಅತ್ಯಂತದೊಡ್ಡ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಎಂದು ಖ್ಯಾತಿ ಪಡೆದಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಳ್ಳಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿರುವ ಅವರು, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್’ರನ್ನು ಕೊಂಡಾಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲತ ಮಾತನಾಡಿರುವ ಅವರು, ಎರಡು ವಿಶ್ವ ಯುದ್ಧಗಳ ನಂತರದ ಇದೀ ಇಡೀ ಪ್ರಪಂಚವೇ ಕೊರೋನಾ ಎಂಬ ಬಿಕ್ಕಟ್ಟೊಂದನ್ನು ಎದುರಿಸುತ್ತಿದೆ. ಕೊರೋನಾ ವೈರಸ್ ಎಂಬುದು ಜಾಗತಿಕ ಯುದ್ಧ ಇದ್ದಂತೆಯೇ, ವೈದ್ಯಕೀಯ ಸಿಬ್ಬಂದಿ ಈ ಯುದ್ಧದಲ್ಲಿ ಸೈನಿಕರಂತೆ ಹೋರಾಟ ನಡೆಸುತ್ತಿದ್ದಾರೆ. ಸೈನಿಕರಂತೆ ಸಮವಸ್ತ್ರ ಇಲ್ಲ ಎನ್ನುವುದನ್ನು ಬಿಟ್ಟರೆ ಇವರ ಹೋರಾಟ ಮಾತ್ರ ಅತ್ಯಂತ ಶ್ಲಾಘನಾರ್ಹವಾದುದು. ಎಂದು ಹೇಳಿದ್ದಾರೆ.
ಇದೇ ವೇಳೆ ಕೊರೋನಾ ವಾರಿಯರ್ಸ್ ವಿರುದ್ದ ನಡೆಸುತ್ತಿರುವ ದೌರ್ಜನ್ಯಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಕೊರೋನಾ ವಾರಿಯರ್ಸ್ ವಿರುದ್ಧದ ದೌರ್ಜನ್ಯವನ್ನು ನಾವು ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಕೊರೋನಾ ವಾರಿಯರ್ಸ್’ಗೆ ರೂ.50 ಲಕ್ಷ ವಿಮಾ ಸೌಲಭ್ಯ ನೀಡುವುದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ.