ಮಡಿಕೇರಿಯಲ್ಲಿ ಗ್ರಾ.ಪಂ ನೌಕರರಿಂದ ಪ್ರತಿಭಟನೆ

02/06/2020

ಮಡಿಕೇರಿ ಜೂ. 2 : ಗ್ರಾಮ ಪಂಚಾಯ್ತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾ.ಪಂ. ನೌಕರರ ಸಂಘದ ಸಿಐಟಿಯು ಸಂಯೋಜಿತ ಜಿಲ್ಲಾ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ಜಿ.ಪಂ. ನೂತನ ಕಚೇರಿ ಸಂಕೀರ್ಣದ ಎದುರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಿದ ಸಂಘದ ಪ್ರಮುಖರು ಬೇಡಿಕೆಗಳ ಮನವಿ ಪತ್ರವನ್ನು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
14ನೇ ಹಣಕಾಸು ಆಯೋಗದ ಹಣದಲ್ಲಿ ಸರ್ಕಾರಿ ಆದೇಶದಂತೆ ಸಿಬ್ಬಂದಿ ವೇತನ ನೀಡಬೇಕು, ಇಲ್ಲಿಯವರೆಗೆ ವೇತನ ನೀಡದೆ ಸತಾಯಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ನಿವೃತ್ತರಾದವರಿಗೆ ಗ್ರಾಜ್ಯೂಟಿ ನೀಡಬೇಕು, ಎಲ್ಲಾ ಸಿಬ್ಬಂದಿಗಳನ್ನು ಅನುಮೋದನೆ ಮಾಡಬೇಕು, ಎಲ್ಲರಿಗೂ ಸೇವಾ ಪುಸ್ತಕ ತೆರೆಯಬೇಕು, ಪಂಪ್ ಆಪರೇಟರ್‍ಗಳಿಂದ ಕರ ವಸೂಲಿಗಾರರ ಹುದ್ದೆಗೆ ಬಡ್ತಿ ನೀಡಬೇಕು, ಕರ ವಸೂಲಿಗಾರರಿಗೆ ಕಾರ್ಯದರ್ಶಿ 2 ಹಾಗೂ ಲೆಕ್ಕಸಹಾಯಕ ಹುದ್ದೆಗೆ ಬಡ್ತಿ ನೀಡಬೇಕು, ಅನುಕಂಪದ ನೇಮಕಾತಿಗಳಿಗೆ ಅವಕಾಶ ಕಲ್ಪಿಸಬೇಕು, ಅಕ್ರಮ ನೇಮಕಾತಿಯನ್ನು ತಡೆಯಬೇಕು, ಈಗಾಗಲೇ ಆಗಿಹೋಗಿರುವ ಅಕ್ರಮ ನೇಮಕಾತಿಯನ್ನು ರದ್ದುಮಾಡಬೇಕು, ಕಂಪ್ಯೂಟರ್ ಅಪರೇಟರ್‍ಗಳಿಗೆ ಅನುಮೋದನೆ ನೀಡಬೇಕು, ಎಲ್ಲಾ ಸಿಬ್ಬಂದಿಗಳ ವೇತನಕ್ಕಾಗಿ ಕೊರತೆ ಇರುವ 382 ಕೋಟಿ ರೂ. ಗಳನ್ನು 2020-21ನೇ ಸಾಲಿನಲ್ಲಿ ಮಂಜೂರು ಮಾಡಿಸಬೇಕು, ಎಲ್ಲಾ ಸಿಬ್ಬಂದಿಗಳಿಗೆ ಪಿಂಚಣಿ ಮತ್ತು ವೈದ್ಯಕೀಯ ವೆಚ್ಚ ಮಂಜೂರು ಮಾಡಬೇಕು, ಕನಿಷ್ಠ ವೇತನ ಪಡೆಯುವ ನೌಕರರಿಗೆ ಬಿಪಿಎಲ್ ಕಾರ್ಡ್ ಉಳಿಸಿಕೊಳ್ಳಲು ಮಂಜೂರಾತಿ ನೀತಿ 1.20 ಲಕ್ಷ ದಿಂದ ರೂ.2 ಲಕ್ಷಕ್ಕೆ ಹೆಚ್ಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರು ಸಿಇಓ ಅವರಿಗೆ ಸಲ್ಲಿಸಿದರು.
ಪ್ರಧಾನ ಕಾರ್ಯದರ್ಶಿ ಎನ್.ರಾಮಚಂದ್ರ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಿ.ಕೆ.ಜತ್ತಪ್ಪ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಎಂ.ಬಿ.ಹರೀಶ್, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಹೆಚ್.ಜಿ.ನವೀನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.