ಅಸ್ಸಾಂ ಭೂಕುಸಿತ : 20 ಸಾವು

03/06/2020

ಗುವಾಹಟಿ ಜೂ.2 : ದಕ್ಷಿಣ ಅಸ್ಸಾಂನ ಬರಾಕ್ ಕಣಿವೆ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಮಂಗಳವಾರ ಸಂಭವಿಸಿದ ಭೂ ಕುಸಿತದಲ್ಲಿ ಸುಮಾರು 20 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
ರಕ್ಷಣಾ ಪಡೆ ಸ್ಥಳಕ್ಕೆ ಧಾವಿಸಿ ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯ ನಡೆಸುತ್ತಿದೆ.
ಮೃತಪಟ್ಟವರಲ್ಲಿ ಏಳು ಮಂದಿ ಕ್ಯಾಚರ್ ಜಿಲ್ಲೆ, ಹೈಲಕಂಡಿ ಜಿಲ್ಲೆಯಲ್ಲಿ ಏಳು ಮಂದಿ ಮತ್ತು ಕರಿಮ್‍ಗಂಜ್ ಜಿಲ್ಲೆಯಲ್ಲಿ ಆರು ಮಂದಿಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಇಲ್ಲಿ ಭಾರೀ ಮಳೆ ಸುರಿಯುತ್ತಿತ್ತು.
ಭಾರತದ ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಈಗಾಗಲೇ ಹಲವು ನೆರೆ, ಪ್ರವಾಹ ಬಂದಿದ್ದು 3.72 ಲಕ್ಷ ಜನ ತೊಂದರೆಗೀಡಾಗಿದ್ದಾರೆ.