“ಇ- ಆಫೀಸ್” ಮೂಲಕ ಕಡತ ಸಲ್ಲಿಕೆ

03/06/2020

ಬೆಂಗಳೂರು ಜೂ.2 : ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನ ಏರಿಕೆಯಾಗುತ್ತಿರುವುದರಿಂದ ಇನ್ನುಮುಂದೆ ತಮ್ಮ ಕಚೇರಿಗೆ ಕಡತಗಳನ್ನು ಭೌತಿಕ ರೂಪದಲ್ಲಿ ಸಲ್ಲಿಸುವ ಬದಲಾಗಿ “ಇ – ಆಫೀಸ್” ಮೂಲಕ ಮಾತ್ರ ಕಡತ ಮತ್ತು ಪತ್ರಗಳನ್ನು ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಚಿಸಿದ್ದಾರೆ.
ಈಗಾಗಲೇ ಜೂ.1ರಿಂದ ಎಲ್ಲಾ ಸಚಿವರ ಕಚೇರಿಗಳಲ್ಲಿ “ಇ – ಆಫೀಸ್ ” ತಂತ್ರಾಂಶವನ್ನು ಅನುಷ್ಠಾನಗೊಳಿಸಿ ಎಲ್ಲ ಕಡತ ಹಾಗೂ ಪತ್ರಗಳನ್ನು ಈ ತಂತ್ರಾಂಶದ ಮೂಲಕ ನಿರ್ವಹಿಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದೆ.
ಅದೇ ರೀತಿ ” ಇ – ಆಫೀಸ್ ” ತಂತ್ರಾಂಶವನ್ನು ಬಳಸಿ ತಮ್ಮ ಕಚೇರಿಯಿಂದ ಸಚಿವಾಲಯದ ಎಲ್ಲಾ ಇಲಾಖೆಗಳು / ಅಧೀನ ಸಂಸ್ಥೆಗಳಿಗೆ ” ಇ – ಆಫೀಸ್ ” ಮೂಲಕವೇ ವ್ಯವಹರಿಸಲಾಗುತ್ತಿದೆ.
ರಾಜ್ಯ ಮಟ್ಟದ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಕಚೇರಿ, ಎಲ್ಲಾ ಪ್ರಾದೇಶಿಕ ಆಯುಕ್ತರ ಕಚೇರಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್, ಪೋಲಿಸ್ ವರಿಷ್ಠಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿ(ಪ್ರಾದೇಶಿಕ) ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ(ಸಾಮಾಜಿಕ)ಗಳ ಕಚೇರಿಗಳಲ್ಲಿಯೂ ” ಇ – ಆಫೀಸ್ ” ಅನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.