ರಾಜ್ಯ ಸರ್ಕಾರದ ಬಗ್ಗೆ ಪ್ರಧಾನಿ ಶ್ಲಾಘನೆ

03/06/2020

ಬೆಂಗಳೂರು ಜೂ.2 : ಕರ್ನಾಟಕದಲ್ಲಿ ಕೊರೋನಾ ವೈರಸ್ ನಿರ್ವಹಣೆಗೆ ಸಂಬಂಧಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬೆಳ್ಳಿ ಮಹೋತ್ಸವದ ಆಚರಣೆಯನ್ನು ವಿಡಿಯೋ ಲಿಂಕ್ ಮೂಲಕ ಉದ್ಘಾಟಿಸಿದ ಪ್ರಧಾನಿ ಮೋದಿ, ರಾಜ್ಯದ ಕೊರೋನಾ ವೈರಸ್ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರವನ್ನು ಶ್ಲಾಘಿಸಿದರು.
‘ಕೋವಿಡ್ -19 ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕರ್ನಾಟಕ ಸರ್ಕಾರದ ಪ್ರಯತ್ನವನ್ನು ನಾನು ಪ್ರಶಂಸಿಸಲು ಬಯಸುತ್ತೇನೆ. ವೈರಸ್ ಅದೃಶ್ಯ ಶತ್ರುವಾಗಿರಬಹುದು. ಆದರೆ, ನಮ್ಮ ಕೊರೋನಾ ಯೋಧರು ಅಜೇಯರಾಗಿದ್ದಾರೆ ಮತ್ತು ಅದೃಶ್ಯ ಹಾಗೂ ಅಜೇಯ ವಿರುದ್ಧದ ಯುದ್ಧದಲ್ಲಿ ನಮ್ಮ ವೈದ್ಯಕೀಯ ಕಾರ್ಯಕರ್ತರು ಗೆಲ್ಲುವುದು ಖಚಿತ. ಅಂತೆಯೇ ಕೊರೋನಾ ವಾರಿಯರ್ಸ್ ಮೇಲಿನ ಹಲ್ಲೆಗಳನ್ನು ಕಟು ಶಬ್ಧಗಳಲ್ಲಿ ಖಂಡಿಸುತ್ತೇನೆ ಎಂದು ಹೇಳಿದ ಪ್ರಧಾನಿ ಮೋದಿ, ಇಂತಹ ಅಮಾನವೀಯ ಘಟನೆಗಳನ್ನು ಸಹಿಸಲಸಾಧ್ಯ.ಕೊರೋನಾ ವಾರಿಯರ್ಸ್ ರಕ್ಷಣೆಗೆ ತೆಗೆದುಕೊಳ್ಳಬಹುದಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತೇವೆ. ಇದೇ ವೇಳೆ ಕೊರೋನಾ ವಾರಿಯರ್ಸ್ ಗೆ ನೈತಿಕ ಬಲ ತುಂಬಲು ಅವರಿಗೆ 50ಲಕ್ಷ ರೂಗಳ ವಿಮೆ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.