ಹಕ್ಕುಚ್ಯುತಿ ಮಂಡಿಸದಿರಲು ನಿರ್ಧಾರ

03/06/2020

ಬೆಂಗಳೂರು ಜೂ.2 : ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಸದ್ಯಕ್ಕೆ ಹಕ್ಕುಚ್ಯುತಿ ಮಂಡಿಸದಿರಲು ನಿರ್ಧರಿಸಿದೆ. ಸ್ಪೀಕರ್ ಜೊತೆ ಈ ಸಂಬಂಧ ಸಭೆ ನಡೆಸಿ ಮುಂದೆ ನಿರ್ಧಾರ ಕೈಗೊಳ್ಳಲು ಮಂಗಳವಾರ ನಡೆದ ಸಮಿತಿ ಸಭೆ ನಿರ್ಧರಿಸಿದೆ.
ಕೊರೋನಾ ವೈದ್ಯಕೀಯ ಉಪಕರಣಗಳ ಖರೀದಿ ಅವ್ಯವಹಾರ ಸಂಬಂಧ ಸ್ಥಳ ಪರಿಶೀಲನೆಗೆ ತಡೆ ನೀಡಿದ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿಗೆ ಮುಂದಾಗುವುದು ಬೇಡ. ಮತ್ತೊಮ್ಮೆ ಸ್ಪೀಕರ್ ಗಮನಕ್ಕೆ ತಂದು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲು ಬಿಜೆಪಿ ಸದಸ್ಯರು ಸೂಚಿಸಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡಿಸದಿರಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ಧರಿಸಿದೆ ಎನ್ನಲಾಗಿದೆ.