ಉಡುಪಿಯಲ್ಲಿ 230 ಪ್ರಕರಣ ಪತ್ತೆ

03/06/2020

ಮಂಗಳೂರು ಜೂ.2 : ಕೊರೋನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ರಾಜಧಾನಿ ಬೆಂಗಳೂರನ್ನು ಮೀರಿಸಿರುವ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 230 ಪ್ರಕರಣ ಪತ್ತೆಯಾಗಿದೆ.ಈ ಪೈಕಿ ಬಹುತೇಕ ಮಂದಿ ಕುಂದಾಪುರ ತಾಲೂಕಿನವರಾಗಿದ್ದಾರೆ.
ಆರೋಗ್ಯ ಇಲಾಖೆ ಮೂಲಗಳ ಪ್ರಕಾರ, ಕುಂದಾಪುರ ತಾಲೂಕಿನಿಂದಲೇ 200 ಪ್ರಕರಣಗಳು ವರದಿಯಾಗಿದ್ದು, ಉಳಿದವು ಉಡುಪಿ ಮತ್ತು ಕಾರ್ಕಳ ತಾಲೂಕುಗಳಿಗೆ ಸೇರಿವೆ, ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿಯೇ ಅತಿ ಹೆಚ್ಚು ಎಂಬಂತೆ 500ರ ಗಡಿಯತ್ತ ಸಾಗಿದೆ.
ಆದಾಗ್ಯೂ, ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯ ವಲಸಿಗ ಕಾರ್ಮಿಕರ ಆಗಮನ ಹಾಗೂ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸುತ್ತಿರುವುದರಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಜಿಲ್ಲೆಯಲ್ಲಿ ವಿಶೇಷವಾಗಿ ಕುಂದಾಪುರದಲ್ಲಿನ ಕಳಪೆ ಕ್ವಾರಂಟೈನ್ ವ್ಯವಸ್ಥೆಯೂ ಇದಕ್ಕೆ ಕಾರಣವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕೆಲ ಕ್ವಾರಂಟೈನ್ ಕೇಂದ್ರಗಳಲ್ಲಿ ನಾಲ್ಕು ಸೋಂಕಿತರನ್ನು ಒಂದೇ ಕೊಠಡಿಗಳಲ್ಲಿ ಇರಿಸಲಾಗುತ್ತಿದೆ. ಅಧಿಕಾರಿಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಸಾಮಾಜಿಕ ಅಂತರ ನಿಯಮವನ್ನು ಅನುಸರಿಸುತ್ತಿಲ್ಲ ಎಂದು ಕೆಲವರು ಹೇಳುತ್ತಾರೆ.