ಚಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ

03/06/2020

ಬೆಂಗಳೂರು ಜೂ.2 : ಕೊರೋನಾ ಸಂಬಂಧಿತ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಆಂಬುಲೆನ್ಸ್ ವಾಹನ ಚಾಲಕ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ನಿವಾಸಿ ಉಮೇಶ್ ಹಡಗಲಿ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 5 ಲಕ್ಷ ರೂ.ಪರಿಹಾರ ನೀಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಅವರು ಮೃತ ಚಾಲಕನ ಪತ್ನಿ ಜ್ಯೋತಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಆಂಬುಲೆನ್ಸ್ ವಾಹನ ಚಾಲಕರಾಗಿದ್ದ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಉಮೇಶ್ ಹಡಗಲಿ ಅವರು ಕೊರೋನಾ ಸಂಬಂಧಿತ ಕರ್ತವ್ಯದಲ್ಲಿದ್ದಾಗ ಮೇ 27ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಮೃತರ ಪತ್ನಿ ಜ್ಯೋತಿ ಅವರಿಗೆ ಜೂನ್ 1ರಂದು ಮುಖ್ಯಮಂತ್ರಿಯವರು ನೀಡಿದ ಭರವಸೆಯಂತೆ 5 ಲಕ್ಷ ರೂ.ಪರಿಹಾರವಾಗಿ ಮಂಜೂರು ಮಾಡಿದ್ದಾರೆ.
ಈ ಘಟನೆಗೆ ಸಾಂತ್ವನ ವ್ಯಕ್ತಪಡಿಸಿರುವ ಸೆಲ್ವಕುಮಾರ್ ಅವರು, ನಿಮ್ಮ ಮುಂದಿನ ಜೀವನ ನಿರ್ವಹಣೆ ಹಾಗೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ.ಪರಿಹಾರವನ್ನು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ 89056406618 ಗೆ ಆನ್‍ಲೈನ್ ಮೂಲಕ ಬಿಡುಗಡೆ ಮಾಡಲಾಗುವುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.