ಅವಹೇಳನಾಕಾರಿ ಪೋಸ್ಟ್ : ಯುವತಿ ವಿರುದ್ಧ ಕುಶಾಲನಗರ ಪೊಲೀಸರಿಗೆ ದೂರು

03/06/2020

ಮಡಿಕೇರಿ ಜೂ.3 :  ಯುವತಿಯೊಬ್ಬಳು ಕಾಂಗ್ರೆಸ್ ಮುಖಂಡರುಗಳಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರವಾದಿ ಪೈಗಂಬರರ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದಾಳೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಯುವತಿಯನ್ನು ವಿಂದ್ಯಾ ಪೂಣಚ್ಚ ಎಂದು ಗುರುತಿಸಿರುವುದಾಗಿ ದೂರಿನಲ್ಲಿ ತಿಳಿಸಿರುವ ಪಕ್ಷದ ಪ್ರಮುಖರು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ದೇಶ, ರಾಜ್ಯ ಮತ್ತು ಜಿಲ್ಲೆ ಕೊರೋನಾ ಸೋಂಕಿನ ಆತಂಕವನ್ನು ಎದುರಿಸುತ್ತಾ ಸಂಕಷ್ಟದಲ್ಲಿರುವಾಗ ಶಾಂತಿಯುತ ಸಮಾಜದ ಸ್ವಾಸ್ಥ್ಯ ಕೆಡಿಸುವ ಕಾರ್ಯವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ರಾಷ್ಟ್ರೀಯ ನಾಯಕರುಗಳಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಮುಸಲ್ಮಾನರ ಗೌರವಕ್ಕೆ ಪಾತ್ರರಾಗಿರುವ ಪ್ರವಾದಿ ಪೈಗಂಬರ್ ರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಗೌರವದಿಂದ ನಡೆದುಕೊಂಡಿರುವುದು ಖಂಡನೀಯವೆಂದರು. ತಕ್ಷಣ ತಪ್ಪಿತಸ್ತರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಅನಂತ್ ಕುಮಾರ್ ಅವರು ಮಾತನಾಡಿ ಮುಂದಿನ ಮೂರು ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷÀ ನಾಪಂಡ ಮುತ್ತಪ್ಪ ಅವರು ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿದರು.
ಕೆಪಿಸಿಸಿ ಮೈಸೂರು ವಿಭಾಗದ ಸಾಮಾಜಿಕ ಜಾಲತಾಣದ ಅಧ್ಯಕ್ಷ ಚಿನ್ನಪ್ಪ, ಕಾರ್ಮಿಕ ಘಟಕದ ಕಾರ್ಯದರ್ಶಿ ಅಜ್ಜಳ್ಳಿ ರವಿ, ಕುಶಾಲನಗರ ಬ್ಲಾಕ್ ಉಸ್ತುವಾರಿ ಪ್ರದೀಪ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಸುರೇಶ್ ಟಿ.ಈ, ಸಾಮಾಜಿಕ ಜಾಲತಾಣ ಅಧ್ಯಕ್ಷÀ ಸೂರಜ್ ಹೊಸೂರು ಮತ್ತಿತರರು ಹಾಜರಿದ್ದರು.