ಮಡಿಕೇರಿ ಆಕಾಶವಾಣಿ ಆವರಣದಲ್ಲಿ ಸಸ್ಯ ವೈವಿಧ್ಯತೆಯ ಅನಾವರಣ

ಮಡಿಕೇರಿ ಜೂ.03 : ವಿಶ್ವ ಪರಿಸರ ದಿನದ ಘೋಷವಾಕ್ಯ ‘ಪರಿಸರ ಮಾಲಿನ್ಯ ನಿಯಂತ್ರಿಸಿ ಜೀವ ವೈವಿಧ್ಯತೆ ಸಂರಕ್ಷಿಸಿ’. ಈ ಹಿನ್ನಲೆಯಲ್ಲಿ ಮಡಿಕೇರಿ ಆಕಾಶವಾಣಿಯ ಆವರಣದಲ್ಲಿ ಸಸ್ಯ ವೈವಿಧ್ಯತೆಯನ್ನು ಸೃಷ್ಟಿ ಮಾಡಲು ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. ಕಚೇರಿ ಮತ್ತು ವಸತಿ ಸಮುಚ್ಛಯ ಆಸುಪಾಸಿನಲ್ಲಿ ವಿಭಿನ್ನವಾದ ಸಸ್ಯಗಳನ್ನು ಪರಿಚಯಿಸಿ ಬೆಳೆಸಲಾಗುತ್ತಿದೆ. ಕಸ್ತೂರಿ ಅರಿಶಿಣ, ಅರಿಶಿಣ, ಶುಂಠಿ, ಮಾಂಗಾಯಿ ಶುಂಠಿ, ಮರಗೆಣಸು, ಸಿಹಿಗೆಣಸು, ಮರಬಾಳೆ, ಅಲಂಕಾರಿಕ ಬಾಳೆ, ಪಚ್ಚ ಬಾಳೆ, ಅಂಜೂರ, ಸೀಬೆ, ಹಲಸು, ಸಪೋಟ, ಪ್ಯಾಸನ್ ಫ್ರೂಟ್, ಮೇ ಲಿಲ್ಲಿ, ಸ್ನೇಕ್ ಪ್ಲಾಂಟ್, ಚಕ್ರಮುನಿ, ಬಟರ್ ಫ್ರೂಟ್, ಮಾವು, ನೆಲ್ಲಿ, ಪಪ್ಪಾಯ, ಹೂಜಿ ಗಿಡ, ಕಬ್ಬು, ಅರಾರೂಟ್, ಹಾಲ್ಗೆಸ, ಚಕೋತ, ಕ್ರೋಟಾನ್, ದಾಸವಾಳ, ಗುಲಾಬಿ, ದತ್ತೂರ (ಗಂಟೆ ಹೂ), ಲೆಮೆನ್‍ಗ್ರಾಸ್, ಆಂಥೋರಿಯಂ, ಕ್ರೈಸ್ತ್ ಪ್ಲಾಂಟ್, ಪಾಯಿನ್‍ಸಿಟಿಯಾ, ಎಲೆ ಬೆಳ್ಳುಳ್ಳಿ, ಇನ್ಸುಲಿನ್ ಪ್ಲಾಂಟ್, ಲಂಟನಾ, ದುರಂತ, ಡ್ರ್ಯಾಗನ್ ಫ್ರೂಟ್, ಕರಿಬೇವು, ಹೀಗೆ ನೂರಾರು ತೆರನಾದ ಸಸ್ಯ ವೈವಿಧ್ಯತೆಯನ್ನು ಪೋಷಿಸುವಲ್ಲಿ ಇಲ್ಲಿಯ ಸಿಬ್ಬಂದಿ ಕೈಜೋಡಿಸಿದ್ದಾರೆ.
ಈ ಸಸ್ಯಗಳ ಸಾಮಾನ್ಯ ಹೆಸರು, ವ್ಯೆಜ್ಞಾನಿಕ ಹೆಸರು ಮತ್ತು ಉಪಯೋಗಗಳ ಬಗ್ಗೆಯೂ ಅಧ್ಯಯನ ಮಾಡಲಾಗುತ್ತಿದೆ. ಈ ಸಲುವಾಗಿ ತಜ್ಞರ, ಅನುಭವಿಗಳ ಸಲಹೆಗಳನ್ನು ಪಡೆಯಲಾಗುತ್ತಿದೆ. ಆಕಾಶವಾಣಿಯು ಸ್ಥಾಪನೆಯಾದಾಗಲಿಂದಲೂ ಇಲ್ಲಿಯ ಆವರಣವನ್ನು ಅಂದಗೊಳಿಸಿಟ್ಟುಕೊಳ್ಳುವಲ್ಲಿ ಗಮನಹರಿಸಲಾಗಿದ್ದು ಈಚಿನ ವರ್ಷಗಳಲ್ಲಿ ಸಸ್ಯ ವೈವಿಧ್ಯತೆಯನ್ನು ಇನ್ನಷ್ಟು ಹೆಚ್ಚಿಸಲು ಗಮನಹರಿಸಲಾಗಿದೆ.
ಕೃಷಿ ತಜ್ಞ, ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕøತರಾಗಿರುವ ಮಡಿಕೇರಿ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾಗಿರುವ ಡಾ.ವಿಜಯ್ ಅಂಗಡಿ ಅವರು ನಿತ್ಯ ಶ್ರಮದಾನ ಮತ್ತು ಶುಚಿತ್ವದ ಕಾರ್ಯದಲ್ಲಿ ಭಾಗಿಯಾಗುತ್ತಿದ್ದು ಇತರೇ ಸಿಬ್ಬಂದಿ ಸಹಕರಿಸುತ್ತಿದ್ದಾರೆ.