ಜೂ. 4 ರಿಂದ ಕೆಲಸ ಬಹಿಷ್ಕರಿಸಿ ಆರೋಗ್ಯ ಇಲಾಖೆ ನೌಕರರ ಮುಷ್ಕರ

03/06/2020

ಮಡಿಕೇರಿ ಜೂ.3 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘ ಜೂ.4 ರಿಂದ ಕೆಲಸ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ಕರೆ ನೀಡಿರುವುದರಿಂದ ಕೊಡಗು ಜಿಲ್ಲೆಯಲ್ಲೂ ನೌಕರರು ಕೆಲಸಕ್ಕೆ ಹಾಜರಾಗುವುದಿಲ್ಲವೆಂದು ಸಂಘದ ಅಧ್ಯಕ್ಷ ಎಂ.ಮಹಾದೇವಪ್ಪ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ ಅವರು, ಆರೋಗ್ಯ ಅಭಿಯಾನ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ರಾಜ್ಯದ ಎಲ್ಲಾ ರೀತಿಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆಗಳ ಬಗ್ಗೆ ರಾಜ್ಯಮಟ್ಟದ ಪ್ರಮುಖ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಅಧಿಕೃತ ಸಭೆಯಲ್ಲಿ ಚರ್ಚಿಸಿ ಸರ್ಕಾರದ ಮಟ್ಟದಲ್ಲಿ ಬೇಡಿಕೆಗಳ ಬಗ್ಗೆ ಸಮಿತಿ ರಚನೆ ಮಾಡುವುದಾಗಿ ಭರವಸೆ ನೀಡಿ ಇಲ್ಲಿಯವರೆಗೂ ಆದೇಶ ನೀಡದಿರುವುದು ವಿಷಾದನೀಯ ಎಂದರು.
ಕೊರೋನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನೌಕರರ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿಲ್ಲ. ಅಲ್ಲದೆ ಕಪ್ಪುಪಟ್ಟಿ ಧರಿಸಿ ಸಾಂಕೇತಿಕವಾಗಿ ನಡೆಸಿದ ಪ್ರತಿಭಟನೆಗೂ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲವೆಂದು ಅವರು ಆರೋಪಿಸಿದರು.
ನೌಕರರ ಪ್ರಮುಖ ಬೇಡಿಕೆಗಳಾದ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಆರೋಗ್ಯ ಮತ್ತು ಜೀವ ವಿಮೆ, ಎಚ್.ಆರ್. ಪಾಲಿಸಿ ಸೇರಿದಂತೆ ಕೊವೀಡ್-19 ವಿಶೇಷ ಪ್ಯಾಕೇಜ್ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳಿಗಾಗಿ ಒತ್ತಾಯಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ನಡೆಸುತ್ತಿರುವುದಾಗಿ ಮಹಾದೇವಪ್ಪ ತಿಳಿಸಿದರು.
ಮನವಿ ಪತ್ರ ನೀಡುವ ಸಂದರ್ಭ ಸಂಘದ ಪ್ರಧಾನ ಕಾರ್ಯದರ್ಶಿ ರಘು, ಖಜಾಂಚಿ ದಿವಾಕರ್ ಮತ್ತಿತರ ಸಿಬ್ಬಂದಿಗಳು ಹಾಜರಿದ್ದರು.