ಹೆಚ್‍ಡಿಕೆ ಗೆ ಸಿಗದ ಆಹ್ವಾನ : ಜೂ. 4 ರಂದು ಜೆಡಿಎಸ್ ಪ್ರತಿಭಟನೆ

03/06/2020

ಮಡಿಕೇರಿ ಜೂ.3 : ಮಳೆಹಾನಿ ಸಂತ್ರಸ್ತರಿಗೆ ನೂತನ ಮನೆಗಳನ್ನು ನಿರ್ಮಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮನೆಗಳ ಹಸ್ತಾಂತರ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಅವಮಾನಿಸಲಾಗಿದೆ ಎಂದು ಆರೋಪಿಸಿರುವ ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು, ಜೂ.4 ರಂದು ಜಂಬೂರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಮದೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಸಂತ್ರಸ್ತರ ಮನೆಗಳ ಗುಣಮಟ್ಟವನ್ನು ಪರಿಶೀಲಿಸಿದ ಅವರು, ಜಂಬೂರು ಗ್ರಾಮದ ಮನೆಗಳ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿದರು. 2018 ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಂಡ 800 ಕ್ಕೂ ಹೆಚ್ಚು ಕುಟುಂಬಗಳಿಗೆ ತಕ್ಷಣ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪ್ರಯತ್ನದಿಂದಲೇ ಇಂದು ನೂತನ ಮನೆಗಳು ನಿರ್ಮಾಣಗೊಂಡಿವೆ. ಕನಿಷ್ಠ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಕೃತಜ್ಞತೆ ಸಲ್ಲಿಸುವ ಔದಾರ್ಯವನ್ನು ಕೂಡ ಆಡಳಿತ ನಡೆಸುತ್ತಿರುವವರು ತೋರುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಜಂಬೂರು ಗ್ರಾಮದಲ್ಲಿ ಮನೆಗಳನ್ನು ಹಸ್ತಾಂತರಿಸುವ ಸಂದರ್ಭ ಜೆಡಿಎಸ್ ವತಿಯಿಂದ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಸೋಮವಾರಪೇಟೆ ತಾಲ್ಲೂಕಿನ ಜಂಬೂರು ಗ್ರಾಮದಲ್ಲಿ ನಿರ್ಮಿಸಿರುವ ಸುಮಾರು 383 ಮನೆಗಳ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲವೆಂದು ಟೀಕಿಸಿದರು. ಮದೆ ಗ್ರಾಮದ ನೂತನ ಮನೆಗಳಿಗೆ ತೆರಳುವ ಗೋಳಿಕಟ್ಟೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಂತ್ರಸ್ತರಿಗೆ ಹಾಗೂ ಸ್ಥಳೀಯ ಗ್ರಾಮಸ್ಥರಿಗೆ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಆದ್ದರಿಂದ ಮಳೆ ಜೋರಾಗುವ ಮೊದಲು ರಸ್ತೆ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂದು ಗಣೇಶ್ ಒತ್ತಾಯಿಸಿದರು.
ಈ ಸಂದರ್ಭ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಖಜಾಂಚಿ ಡೆನ್ನಿ ಬರೋಸ್, ಕಾರ್ಯದರ್ಶಿ ಎನ್.ಸಿ.ಸುನಿಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಬೆಟ್ಟಗೇರಿ, ಗಣೇಶ್, ಮಡಿಕೇರಿ ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್ ಬಾದ್ ಶಾ, ಮಡಿಕೇರಿ ನಗರ ಎಸ್.ಸಿ. ಘಟಕದ ಅಧ್ಯಕ್ಷ ಹೆಚ್.ಎ.ರವಿ ಮತ್ತಿತರರು ಹಾಜರಿದ್ದರು.