ಬಾಣಾವಾರದಲ್ಲಿ ಕಾಡಾನೆ ದಾಳಿ : ಕೃಷಿ ನಾಶ : ರೈತರಲ್ಲಿ ಆತಂಕ

03/06/2020

ಸೋಮವಾರಪೇಟೆ ಜೂ. 3 : ಕಾಡಾನೆಗಳ ಹಿಂಡು ಕೃಷಿ ಫಸಲು ಹಾನಿ ಮಾಡುತ್ತಿರುವುದರಿಂದ ಕೃಷಿಕರು ಕಂಗಾಲಾಗಿದ್ದಾರೆ.
ಬಾಣಾವಾರ ಕಲ್ಲುಕೊರೆ ನಿವಾಸಿ ಕಂದಸ್ವಾಮಿ ಅವರು ಎರಡು ಎಕರೆ ಜಾಗದಲ್ಲಿ ಬೆಳೆದಿರುವ ಸಿಹಿ ಗೆಣಸಿಗೆ ಮೂರನೆ ಬಾರಿ ಕಾಡಾನೆಗಳು ದಾಳಿ ಮಾಡಿ, ಉಳಿದ ಫಸಲನ್ನು ತಿಂದು ಖಾಲಿ ಮಾಡಿವೆ.
ಬುಧವಾರ ಬೆಳಗ್ಗಿನ ಜಾವ 6 ಕಾಡಾನೆಗಳು ದಾಳಿ ಮಾಡಿದ್ದು, ಗೆಣಸಿನ ಜೊತೆಯಲ್ಲೇ ಜಾಗದಲ್ಲಿದ್ದ ಪೈಪ್‍ಗಳನ್ನು ತುಳಿದು ಹಾನಿಗೊಳಿಸಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ, ಭೂಮಿ ಒಳಗಿನ ಫಸಲಿಗೆ ಪರಿಹಾರ ಕೊಡಲು ಅವಕಾಶವಿಲ್ಲ ಎಂದು ಹೇಳುತ್ತಾರೆ ಎಂದು ಕಂದಸ್ವಾಮಿ ನೋವು ತೋಡಿಕೊಂಡಿದ್ದಾರೆ.
ಯಡವನಾಡು ಗ್ರಾಮದಲ್ಲೂ ಕಾಡಾನೆ ಕಾಟ ಪ್ರಾರಂಭವಾಗಿದ್ದು, ಸುನೀಲ್, ಹರೀಶ್ ಎಂಬವರ ಶುಂಠಿ, ಗೆಣಸು ಫಸಲು ಹಾನಿಗೊಳಿಸಿವೆ. ಯಡವನಾಡು, ಮಾಲಂಬಿ ಮೀಸಲು ಅರಣ್ಯದಿಂದ ಹೊರಬರುವ ಕಾಡಾನೆಗಳು, ಗ್ರಾಮೀಣ ಭಾಗದಲ್ಲಿ ಕೃಷಿ ಫಸಲು ಹಾನಿಗೊಳಿಸುತ್ತಿದ್ದು, ಕಾಡಾನೆ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕೆಂದು ಕೃಷಿಕರು ಒತ್ತಾಯಿಸಿದ್ದಾರೆ.