ಸಂತ್ರಸ್ತರ ಕಡೆಗಣನೆ ಆರೋಪ : ಸೂರಿಗಾಗಿ ಪಾದಯಾತ್ರೆ ನಡೆಸಲು ಜೆಡಿಎಸ್ ನಿರ್ಧಾರ

ಮಡಿಕೇರಿ ಜೂ.10 : ಕೊಡಗಿನಲ್ಲಿ ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಕುಟುಂಬಗಳಿಗೆ ಮತ್ತು ನೆಲೆ ಇಲ್ಲದ ಮಂದಿಗೆ ಸೂರು ಒದಗಿಸುವಂತೆ ಒತ್ತಾಯಿಸಿ ವಿಕೋಪಕ್ಕೆ ತುತ್ತಾದ ಪ್ರದೇಶಗಳಲ್ಲಿ ‘ಪಾದಯಾತ್ರೆ’ ಹಮ್ಮಿಕೊಳ್ಳಲಾಗುವುದೆಂದು ಕೊಡಗು ಜಿಲ್ಲಾ ಜಾತ್ಯತೀತ ಜನತಾ ದಳ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಗಣೇಶ್ ಅವರು 2019 ರಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಜಿಲ್ಲೆಯ ಕೊಂಡಂಗೇರಿ, ನೆಲ್ಲಿಹುದಿಕೆರಿ, ಕರಡಿಗೋಡು, ಕುಶಾಲನಗರ, ತೋರ ಮುಂತಾದ ಪ್ರದೇಶಗಳಲ್ಲಿ ಸುಮಾರು 650 ಕ್ಕೂ ಹೆಚ್ಚಿನ ಕುಟುಂಬಗಳು ನೆಲೆ ಕಳೆದುಕೊಂಡಿದ್ದು, ಈ ಕುಟುಂಬಗಳಿಗೆ ಸೂರು ಒದಗಿಸುವಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.
ವಸತಿ ಸಚಿವರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು, ಕಳೆದ ಸಾಲಿನ ಸಂತ್ರಸ್ತರಿಗೆ ಇದುವರೆಗೆ ಒಂದೇ ಒಂದು ಮನೆಯನ್ನು ನೀಡಲು ಸಾಧ್ಯವಾಗಿಲ್ಲ. ಹಿಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಯತ್ನದಿಂದ 2018ರ ನಿರಾಶ್ರಿತರಿಗೆ ಸುಮಾರು 10 ಲಕ್ಷ ರೂ. ವೆಚ್ಚದ ಮನೆಗಳನ್ನು ನಿರ್ಮಿಸಲಾಗಿದ್ದು, ಇವುಗಳನ್ನು ಉದ್ಘಾಟಿಸಿದ ಈಗಿನ ಸರ್ಕಾರ ಅದನ್ನೇ ತಮ್ಮ ಸಾಧನೆಯೆಂದು ಬಿಂಬಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಹಿಂದಿನ ಸರ್ಕಾರ ಸಂತ್ರಸ್ತರಿಗೆ ಮನೆ ನಿರ್ಮಾಣವಾಗುವವರೆಗೆ ಮಾಸಿಕ ತಲಾ 10 ಸಾವಿರ ರೂ.ಗಳನ್ನು ಬಾಡಿಗೆಯ ರೂಪದಲ್ಲಿ ನೀಡುವುದಾಗಿ ತಿಳಿಸಿತ್ತು. ಆದರೆ, ಆ ಬಳಿಕ ಅಧಿಕಾರಕ್ಕೆ ಬಂದ ಸರ್ಕಾರ ಸೂರನ್ನು ನೀಡದೆ, ಬಾಡಿಗೆ ಹಣವನ್ನು ಬಿಡುಗಡೆ ಮಾಡದೆ ಸಂತ್ರಸ್ತರನ್ನು ನಡು ನೀರಿನಲ್ಲಿ ಕೈಬಿಟ್ಟಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದಾಪುರ, ಕರಡಿಗೋಡು ಭಾಗದಲ್ಲಿ ಸಾಕಷ್ಟು ಸರ್ಕಾರಿ ಜಮೀನು ಲಭ್ಯವಿದ್ದರೂ ಅದನ್ನು ವಿತರಿಸದೆ, ರಾಜಕೀಯ ದ್ವೇಷದಿಂದ ಸಂತ್ರಸ್ತರನ್ನು ಬೇರೆಡೆಗೆ ಸ್ಥಳಾಂತರಿಸಲು ಹುನ್ನಾರ ನಡೆದಿದೆ. ಈಗಾಗಲೆ ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ನದಿ ದಡದಲ್ಲಿರುವ ನಿವಾಸಿಗಳಿಗೆ ಮನೆ ತೆರವುಗೊಳಿಸುವಂತೆ ನೋಟಿಸ್ ನೀಡಿದೆ. ಸಂತ್ರಸ್ತರಿಗೆ ಮತ್ತು ಸೂರಿಲ್ಲದ ಕಡು ಬಡವರಿಗೆ ಮನೆ ನೀಡುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದ್ದರು ಅಧಿಕಾರಿಗಳು ಅದರಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗಣೇಶ್ ಆರೋಪಿಸಿದರು.
ಸುಳ್ಳು ಹೇಳುವುದೇ ಬಿಜೆಪಿಯವರ ಅಜೆಂಡಾವಾಗಿದ್ದು, ಸಂತ್ರಸ್ತರಿಗೆ ಸೂರು ಮತ್ತು ಬಾಡಿಗೆಯನ್ನು ನೀಡದೆ, ಸತಾಯಿಸಲಾಗುತ್ತಿದೆ. ಈಗಿನ ಸರ್ಕಾರ ಕೇವಲ ಭರವಸೆಗಳಲ್ಲೆ ಕಾಲ ಕಳೆಯುತ್ತಿದೆ ಎಂದು ಟೀಕಿಸಿದ ಅವರು, ಅವರು, ನಿರಾಶ್ರಿತರಿಗೆ ಮತ್ತು ಕಡು ಬಡವರಿಗೆ ಮನೆ ದೊರಕಿಸಿಕೊಡುವವರೆಗೆ ಜೆಡಿಎಸ್ ವತಿಯಿಂದ ನಿರಂತರ ಹೋರಾಟವನ್ನು ನಡೆಸಲಾಗುವುದು ಎಂದರು. ಪ್ರಥಮ ಹಂತದಲ್ಲಿ ಕೊಂಡಂಗೇರಿಯಿಂದ ಪ್ರಾಕೃತಿಕ ವಿಕೋಪ ಪೀಡಿತ ಪ್ರದೇಶಗಳಲ್ಲಿ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳ್ಳಲಾಗುವುದೆಂದು ತಿಳಿಸಿದರು.
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ನಿರಾಶ್ರಿತರು ಸರ್ಕಾರದ ಭರವಸೆಯನ್ನೆ ನಂಬಿ ಕಾಲ ಕಳೆಯುತ್ತಿದ್ದಾರೆ. ಆದರೆ, ಅವರಿಗೆ ಮನೆಯಾಗಲಿ, ಬಾಡಿಗೆಯಾಗಲಿ ಇದುವರೆಗೆ ಸಿಕ್ಕಿಲ್ಲ. ಅತ್ತ ಮನೆಯೂ ಇಲ್ಲ, ಇತ್ತ ಪರಿಹಾರವೂ ಇಲ್ಲ ಎಂಬಂತಹ ಸ್ಥಿತಿ ಅವರದ್ದಾಗಿದೆ ಎಂದರು.
ಸಂತಸ್ತರಿಗೆ ಸೂರು ಒದಗಿಸುವ ವಿಚಾರಗಳ ಬೆನ್ನಲ್ಲೆ, ಜಿಲ್ಲೆಯ ಹಲವೆಡೆಗಳಲ್ಲಿ ರಸ್ತೆ ಬದಿಗಳಲ್ಲಿ ಟೆಂಟ್‍ಗಳನ್ನು ಹಾಕಿ ಜೀವನ ಸಾಗಿಸುತ್ತಿರುವ ಕಡು ಬಡವರು ಮನೆಗಳಿಗಾಗಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಅದನ್ನು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಜಿಲ್ಲಾಡಳಿತ ತಿರಸ್ಕರಿಸುತ್ತಿದೆ. ಅದರ ಬದಲು ಈ ಅರ್ಜಿಗಳನ್ನು ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡುವ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಆಲಿ, ಜಿಲ್ಲಾ ಉಪಾಧ್ಯಕ್ಷ ಶಿವದಾಸ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಗೌತಮ್ ಹಾಗೂ ವೀರಾಜಪೇಟೆ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಎಂ.ಎ.ಯಮುನಾ ಉಪಸ್ಥಿತರಿದ್ದರು.
