14 ಕಡೆ ಏಕಕಾಲಕ್ಕೆ ಎಸಿಬಿ ದಾಳಿ
11/06/2020

ಬೆಂಗಳೂರು ಜೂ.10 : ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ರಾಜ್ಯದ ವಿವಿಧ 14 ಸ್ಥಳಗಳಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದಡಿ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಎಲ್.ಸತೀಶ್‍ಕುಮಾರ್‍ಸೇರಿ ರಾಜ್ಯದ ನಾಲ್ವರು ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಎಲ್.ಸತೀಶ್ ಕುಮಾರ್ ಅವರ ಮೈಸೂರು ನಗರದ ಟಿ.ಕೆ.ಲೇಔಟ್ ನ ವಾಸದ ಮನೆ, ಬೆಂಗಳೂರಿನ ಡಾಲರ್ಸ್ ಕಾಲೋನಿಯ ಬಾಡಿಗೆ ಮನೆ, ಅವರು ಕರ್ತವ್ಯ ಕಾರ್ಯನಿರ್ವಹಿಸುತ್ತಿರುವ ಗಾಂಧಿನಗರದ ವಾಣಿಜ್ಯ ತೆರಿಗೆ ಕಚೇರಿ ಮೇಲೂ ದಾಳಿ ಮಾಡಲಾಗಿದೆ.
ಇನ್ನು, ಕೋಲಾರದ ಶ್ರೀನಿವಾಸಪುರ ವಲಯದ ವಲಯ ಅರಣ್ಯಾಧಿಕಾರಿ ಎನ್.ರಾಮಕೃಷ್ಣ ಅವರ ವಿಜಯನಗರದಲ್ಲಿನ ನಿವಾಸ, ಬೆಂಗಳೂರಿನ ವಾಸದ ಮನೆ ಹಾಗೂ ಕಾರ್ಯನಿರ್ವಹಿಸುತ್ತಿರುವ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
