ಪರೀಕ್ಷೆ ಸಂದರ್ಭ ಅವಘಡಗಳಿಗೆ ಅವಕಾಶವಿಲ್ಲ

11/06/2020

ಬೆಂಗಳೂರು ಜೂ.10 : ಕೋರೋನಾ ಸಂಕಷ್ಟ ಪರಿಸ್ಥಿತಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಇಡೀ ಸಮಾಜ ಎದುರು ನೋಡುತ್ತಿದ್ದು, ಯಾವುದೇ ಅವಘಡಗಳಿಗೆ ಅವಕಾಶ ನೀಡದೆ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷಾ ಪೂರ್ವ ಸಿದ್ಧತೆ ಕುರಿತಂತೆ ರಾಜ್ಯಾದ್ಯಂತ 31 ಜಿಲ್ಲಾ ಕೇಂದ್ರಗಳಿಗೆ ಕಳೆದ ಹದಿನೈದು ದಿನಗಳಲ್ಲಿ ಸುಮಾರು ಐದು ಸಾವಿರ ಕಿಲೋಮೀಟರ್ ಗಳಷ್ಟು ಸಂಚಾರ ಕೈಗೊಂಡು, ಸಭೆ ನಡೆಸಿ ನಿರ್ದೇಶನ ನೀಡಿರುವ ಸಚಿವ ಸುರೇಶ್ ಕುಮಾರ್, ಇಂದು ತಮ್ಮ ಅಭಿಯಾನದ ಕಡೆಯ ಭಾಗವಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಿದರು.
ರಾಜ್ಯ ಹೈಕೋರ್ಟ್ ನಿರ್ದೇಶನದ ಅನುಸಾರ ನಡೆಯುತ್ತಿರುವ ಪರೀಕ್ಷೆಗಳು ಸಮಾಜಕ್ಕೆ ಭರವಸೆ ಮೂಡಿಸುವ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಣೆಯಾಗಬೇಕು, ಪರೀಕ್ಷೆಗಳು ನಡೆಯುತ್ತಿರುವ ಈ ವಿಶಿಷ್ಟ ಸಾಮಾಜಿಕ ಸಂದರ್ಭವನ್ನು ಪ್ರತಿಷ್ಠೆಯಾಗಿ ಪರಿಗಣಿಸದೇ ನಮ್ಮ ಸಾಮಾಜಿಕ ಬದ್ಧತೆಗೆ ಸವಾಲಾಗಿ ಪರಿಗಣಿಸಿ ಎಲ್ಲ ಅಧಿಕಾರಿಗಳು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು ಎಂದರು.