ಚೋಳ ರಾಜರ ಕಾಲದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯ

11/06/2020

ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯವು ಚೋಳ ರಾಜರ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದು, ಸುಮಾರು 1000 ರಿಂದ 1200 ವರ್ಷಗಳಿಗಿಂತಲೂ ಪುರಾತನವಾದುದಾಗಿದೆ. ಈ ದೇವಾಲಯವನ್ನು ಗಡಸು ಕಲ್ಲಿನಿಂದ ಬಹಳ ಶ್ರಮವಹಿಸಿ ನಿಮಿಸಲಾಗಿದೆ ಎಂಬ ಪ್ರತೀತಿ ಇದೆ.
ಈ ದೇವಾಲಯವು ಕರ್ನಾಟಕ ರಾಜ್ಯದ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಿಂದ 10 ಕಿ.ಮೀ ದೂರದ ಶಾಂತಳ್ಳಿ ಎಂಬ ಗ್ರಾಮದಲ್ಲಿದೆ. ಇದು ಕೊಡಗಿನಲ್ಲಿ ಪ್ರಖ್ಯಾತವಾದ ಶಿವದೇವಾಲಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಇಲ್ಲಿ ಪ್ರತಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ, ಪ್ರತೀವರ್ಷವೂ ಐದು ದಿನಗಳ ಕಾಲ ಬಹು ವೈಶಿಷ್ಟ್ಯಯಿಂದಲೂ ವೈಭವದಿಂದಲೂ ಶ್ರೀ ಕುಮಾರಲಿಂಗೇಶ್ವ ಮಹಾ ರಥೋತ್ಸವ ಹಾಗೂ ಜಾತ್ರೆ ನಡೆಯುತ್ತದೆ.
ಎರಡನೇ ದಿನ, ಮಕರ ಸಂಕ್ರಮಣದಂದು ಕರುವಿನ ಹಬ್ಬ, ದೇಗುಲದ ಗರುಡಗಂಭದ ಅಗ್ರಪೀಠದಲ್ಲಿ ತುಪ್ಪದ ನಂದಾದೀಪವನ್ನು ಬೆಳಗಿಸುವುದರ ಮೂಲಕ ಅಂಕುರಾರ್ಪಣ, ಮಹಾಮಂಗಳಾರತಿ, ಪ್ರಾರ್ಥನೆ, ಪ್ರಸಾದ ಸ್ವೀಕಾರ ನಡೆಯುತ್ತದೆ. ಮೂರನೆಯ ದಿನ, ನಿತಂರವಾಗಿ ಅನಾದಿಕಾಲದಿಂದಲೂ ನಡೆದುಬಂದಿರುವ ಪದ್ಧತಿಯಾನುಸಾರ ಅರಸುಭಲ ಸೇವೆ ನಡೆಯುತ್ತದೆ. ಇದು ಸಂಸ್ಕಾರದಿಂದ ಕೂಡಿದ್ದು, ಕೂತಿನಾಡು, ತೋಳುನಾಡು, ಪುಷ್ಪಗಿರಿ, ಯಡೂರು, ತಲ್ತಾರೆ ಶೆಟ್ಟಳ್ಳಿಗಳಲ್ಲಿ ಅರಸುಭಲ ಸೇವೆಯನ್ನು ಭಕ್ತಾದಿಗಳು ನೆರವೇರಿಸುತ್ತಾರೆ. ನಂತರ ವಿಶೇಷ ವೈಭವದಿಂದ ಹಾಗೂ ವಿಶಿಷ್ಟ ರೀತಿಯಲ್ಲಿ ಸಾಮೂಹಿಕವಾಗಿ ದೇವಾಲಯಕ್ಕೆ ಆಗಮಿಸಿ, ತಾವು ಬೆಳೆದಂತಹ ನವ ದವಸ ಧಾನ್ಯ, ಫಲ ತಾಂಬೂಲ, ಕಾಣಿಕೆ – ಹರಕೆಗಳನ್ನು ಶ್ರದ್ಧಾಭಕ್ತಿಗಳಿಂದ ದೇವರಿಗೆ ಸಲ್ಲಿಸಿ, ಪುನೀತರಾಗುತ್ತಾರೆ. ಇದನ್ನು ದೇವರು ತರುವ ಸಂಪ್ರದಾಯವೆಂದೂ ಕೂಡ ಹೇಳುತ್ತಾರೆ.
ಕೊಡಗಿನ ಗುಡ್ಡ ಗಾಡುಗಳ ಮಧ್ಯೆ ಪುಟ್ಟ ಗ್ರಾಮವಾಗಿ ಕಂಗೊಳಿಸುತ್ತಿರುವ ಶಾಂತಳ್ಳಿಯಲ್ಲಿ ನಡೆಯುವ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವವು, ಗ್ರಾಮಸ್ಥರು ಸಹಯೋಗದೊಂದಿಗೆ ಐದು ದಿನಗಳ ಕಾಲ ವಿಜ್ರಂಭಣೆಯಿಂದ ಕೂಡಿರುತ್ತದೆ. ಹೊರ ಜಿಲ್ಲೆ, ಹೊರ ರಾಜ್ಯ, ಸುತ್ತ- ಮುತ್ತಲಿನ ಗ್ರಾಮಗಳು ಸೇರಿದಂತೆ, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಥೋತ್ಸವವನ್ನು ಕಣ್ತುಂಬಿಕೊಂಡು, ಪುನೀತರಾಗುತ್ತಾರೆ.