ಶಾಲೆಗಳು ಪುನರಾರಂಭಗೊಂಡರೆ ಸರ್ಕಾರದ ನಿಯಮವನ್ನು ಪಾಲಿಸಲು ಬದ್ಧ : ವಿರಾಜಪೇಟೆ ತಾಲೂಕು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟಗಳ ನಿರ್ಧಾರ

11/06/2020

ಮಡಿಕೇರಿ ಜೂ. 11 : ರಾಜ್ಯ ಸರಕಾರವು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ದಿನ ನಿಗದಿ ಪಡಿಸುವ ಸಿದ್ಧತೆಯಲ್ಲಿ ಇರುವಾಗಲೇ ವಿರಾಜಪೇಟೆ ತಾಲೂಕು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟಗಳ ಸಭೆ ಗೋಣಿಕೊಪ್ಪ ಲಯನ್ಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಒಕ್ಕೂಟದ ತಾಲೂಕು ಅಧ್ಯಕ್ಷ ಝರು ಗಣಪತಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಿಗಿ ಅವರು ಮಾತನಾಡಿ, ಕೊರೋನಾ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಪುನರಾರಂಭಗೊಂಡಲ್ಲಿ ಪಾಲಿಸಬೇಕಾದ ಸರಕಾರೀ ನಿಯಮಗಳನ್ನು ವಿವರಿಸಿದರು.
ಸರಕಾರವು ಈಗಾಗಲೇ ಮುಂದಿರಿಸಿರುವ ಆಯ್ಕೆಗಳ ಬಗ್ಗೆ ಸಂಸ್ಥೆಗಳ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ತಿಳಿಸುವಂತೆ ನಿರ್ದೇಶಿಸಿದರು. ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಂಸ್ಥೆಗಳು ತಮ್ಮ ಎಲ್ಲಾ ಚಟುವಟಿಕೆಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು. ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಹಾಗೂ ಶಾಲಾ ದಾಖಲಾತಿಗೆ ಸಂಬಂಧಪಟ್ಟಂತೆ ಅಧಿಕೃತ ನಿದರ್ಶನಗಳೊಂದಿಗೆ ದೂರುಗಳು ಬಂದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸರಕಾರ ಮುಂದಾಗಬೇಕಾಗುವುದು ಎಂದು ತಿಳಿಸಿದರು.

ಆರ್.ಟಿ.ಇ. ಮರುಪಾವತಿ ಅಪ್‍ಲೋಡ್ ಆಗದಿರುವ ಬಗ್ಗೆ ಆಡಳಿತ ಮಂಡಳಿಯ ಕೆಲವರಿಂದ ಆಕ್ಷೇಪ ವ್ಯಕ್ತವಾಯ್ತು. ಈ ಬಗ್ಗೆ ಸಮಜಾಯಿಷಿಕೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು 2018-19ನೇ ಸಾಲಿನ ಆರ್.ಟಿ.ಇ. ಮರುಪಾವತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಬಗ್ಗೆ ಶಿಕ್ಷಣ ಸಂಸ್ಥೆಗಳಿಗೆ ಅನಗತ್ಯ ಆತಂಕ ಬೇಡ, ಕೆಲವು ಸಂಸ್ಥೆಗಳ ಡಯಸ್‍ಕೋಡ್‍ಗಳು ವಿಲೀನವಾಗಿರುವುದರಿಂದ ವಿಳಂಬವಾಗಿದೆ ಎಂದರು. ದಿನಬಿಟ್ಟು ತರಗತಿ ನಡೆಸುವ ಆಯ್ಕೆಗೆ ಹೆಚ್ಚಿನ ಆಡಲಿತ ಮಂಡಳಿಗಳು ಸಹಮತ ವ್ಯಕ್ತ ಪಡಿಸಿದರು.

ವಿರಾಜಪೇಟೆ ತಾಲೂಕು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟಗಳ ಸ್ಥಾಪಕ ಗೌರವಾಧ್ಯಕ್ಷ ಶ್ರೀಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಂದರ್ಭದಲಲಿ ಮಾತನಾಡಿದರು. ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕೆ. ಎಸ್.ಚಂಗಪ್ಪ ಹಾಜರಿದ್ದರು. ಕ್ಷೇತ್ರ ಶಿಕ್ಷಣ ಸಂಯೋಜಕರಾದ ಉತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಕ್ಕೂಟ್ ಕಾರ್ಯದರ್ಶಿ ತಿಮ್ಮಯ್ಯ ಕೋಟ್ರಂಗಡ ಕಾರ್ಯಕ್ರಮಗಳನ್ನು ನಿರೂಪಿಸಿದರು. ತಾಲೂಕಿನಾದ್ಯಂತ ಹೆಚ್ಚಿನ ಆಡಳಿತ ಮಂಡಳಿ ಪ್ರತಿನಿಧಿಗಳು ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.