ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

11/06/2020

ಮಡಿಕೇರಿ ಜೂ.11 : ಪ್ರಸಕ್ತ(2020-21) ಸಾಲಿಗೆ ಕೊಡಗು ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ನ್ಯಾಯಾಂಗ ಆಡಳಿತದಲ್ಲಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹಾಗೂ ನಿಬಂಧನೆಗಳು ಇಂತಿವೆ. ಅಭ್ಯರ್ಥಿಗಳು ವರ್ಗ-1 ಮತ್ತು ಪ್ರವರ್ಗ-2ಎ, 3ಎ, 3ಬಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯದ ಮಿತಿ ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ.3.50 ಲಕ್ಷ ಹಾಗೂ ಪ್ರವರ್ಗ-2ಎ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ.2.50 ಲಕ್ಷ ಒಳಪಟ್ಟಿರಬೇಕು. ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಪ್ರವರ್ಗ-1 ರ ಅಭ್ಯರ್ಥಿಗಳ ಕೊರತೆ ಇದ್ದಲ್ಲಿ ಸರ್ಕಾರದ ಆದೇಶದನ್ವಯ ನಿಯಮಾನುಸಾರ ಇತರೆ ವರ್ಗಗಳಲ್ಲಿ ಆಯ್ಕೆ ಮಾಡಲಾಗುವುದು. ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕಾನೂನು ಪದವಿ ಪಡೆದು 2 ವರ್ಷ ಒಳಗಿರಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅರ್ಜಿದಾರರ ವಯಸ್ಸು ಪ್ರವರ್ಗ-1 ರ ಅಭ್ಯರ್ಥಿಗಳು 40 ವರ್ಷದೊಳಗಿರಬೇಕು. ಪ್ರವರ್ಗ 2ಎ, 3ಎ, 3ಬಿ ರ ಅಭ್ಯರ್ಥಿಗಳು 38 ವರ್ಷದೊಳಗಿರಬೇಕು.
ಅಭ್ಯರ್ಥಿಯು ತನ್ನ ಹೆಸರನ್ನು ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿಸಿರಬೇಕು. ಕಾನೂನು ತರಬೇತಿಯು 4 ವರ್ಷಗಳ ಅವಧಿಯಾಗಿದ್ದು, ಮಾಸಿಕ ರೂ.4 ಸಾವಿರ ದಂತೆ ಶಿಷ್ಯವೇತನ ನೀಡಲಾಗುವುದು. ಕಾನೂನು ತರಬೇತಿಯನ್ನು ಕೊಡಗು ಜಿಲ್ಲೆಯಿಂದ ಹಿಂದುಳಿದ ವರ್ಗಗಳ 20 ಅಭ್ಯರ್ಥಿಗಳಿಗೆ ನೀಡಲು ಅವಕಾಶವಿರುತ್ತದೆ. ಆಯ್ಕೆಯಾದ ಅಭ್ಯರ್ಥಿಯು ವಕೀಲ ತರಬೇತಿಗೆ ಹೋಗುವ ಮುನ್ನ, ತರಬೇತಿಯನ್ನು ಮಧ್ಯದಲ್ಲಿ ಬಿಟ್ಟಲ್ಲಿ ತರಬೇತಿ ವೆಚ್ಚಕ್ಕೆ ಶೇ.10 ರಂತೆ ಬಡ್ಡಿ ಸೇರಿಸಿ ಸರ್ಕಾರಕ್ಕೆ ಪಾವತಿ ಮಾಡುತ್ತೇನೆಂದು ರೂ.100 ರ ಛಾಪಾ ಕಾಗದಲ್ಲಿ ಬರೆದುಕೊಡಬೇಕು.
ಅರ್ಜಿ ನಮೂನೆಯನ್ನು ಜೂನ್ 30 ರೊಳಗೆ ಕಚೇರಿ ವೇಳೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಮಡಿಕೇರಿ ಇವರನ್ನು ಕಚೇರಿ ವೇಳೆಯಲ್ಲಿ ದೂ.ಸಂಖ್ಯೆ 08272-225628 ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವರು ತಿಳಿಸಿದ್ದಾರೆ.