ಕೋವಿಡ್-19 ಸಂಬಂಧ ಮಸೀದಿಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿ

11/06/2020

ಮಡಿಕೇರಿ ಜೂ.11 : ರಾಜ್ಯ ವಕ್ಫ್ ಮಂಡಳಿ ಬೆಂಗಳೂರು ಇವರ ಆದೇಶದಂತೆ ಜುಮ್ಮಾ ನಮಾಜಿಗೆ ಪ್ರತ್ಯೇಕವಾಗಿ ಮೂರು ಜಮಾಹತ್ ಆಗಿ ಅರ್ಧ ಗಂಟೆಗೊಮ್ಮೆ ಅಂದರೆ 12.30 ರಿಂದ 1.14, 1.30 ರಿಂದ 2 ಗಂಟೆ ಹಾಗೂ 2.15 ರಿಂದ 2.45 ರವರೆಗೆ ಜನ ಸಂದಣಿ ಹಾಗೂ ಗೊಂದಲ ಆಗದಂತೆ ನಿರ್ವಹಿಸಬೇಕು.
ಪ್ರತೀ ರಾತ್ರಿ ಇಶಾ ನಮಾಜಿನ ನಂತರ ಮಸೀದಿ ಹಾಗೂ ಮಸೀದಿ ಆವರಣವನ್ನು ಕೀಟನಾಶಕ ಔಷಧಿಯನ್ನು ಬಳಸಿ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. 10 ವರ್ಷದ ಒಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಮಸೀದಿಯಲ್ಲಿ ಪ್ರವೇಶವನ್ನು ಕಡ್ಡಾಯವಾಗಿ ನಿರ್ಭಂದಿಸಬೇಕು. ಕೋವಿಡ್-19 ರೋಗ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಇರುವವರು ಮಸೀದಿಗೆ ಪ್ರವೇಶಿಸಬಾರದು, ಮಸೀದಿಯ ಶೌಚಾಲಯ ಹಾಗೂ ವಜೂ ಖಾನಗಳನ್ನು ಕಡ್ಡಾಯವಾಗಿ ಮುಚ್ಚಬೇಕು.
ನಮಾಜಿಗಳು ಮನೆಯಿಂದಲೇ ವಜೂ ಮಾಡಿಕೊಂಡು ಬರಬೇಕು. ತಮ್ಮ ಪಾದರಕ್ಷೆಗಳನ್ನು ಗೇಟಿನ ಹೊರಗಡೆ ಬಿಡಬೇಕು, ನಮಾಜಿಗಳು ಮಸೀದಿ ಒಳಗಡೆ ಪ್ರವೇಶಿಸುವಾಗ ಕಡ್ಡಾಯವಾಗಿ ದೇಹದ ಉಷ್ಣಾಂಶವನ್ನು ಪರಿಶೀಲನೆ ಮಾಡಿಸಿಕೊಂಡು ಬರಬೇಕು. ಪ್ರವೇಶದ ವೇಳೆ ಕೋವಿಡ್ -19 ರ ಲಕ್ಷಣಗಳು ಕಂಡುಬಂದಲ್ಲಿ ತ್ವರಿತವಾಗಿ ಸಹಾಯವಾಣಿ ಸಂಖ್ಯೆ 14410 ಗೆ ಕರೆ ಮಾಡಬೇಕು. ಮಸೀದಿ ದರ್ಗಾಗಳಿಗೆ ಪ್ರವೇಶ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಮಾಡಬೇಕು. ಮಸೀದಿ ಆವರಣದಲ್ಲಿ ಟವಲ್ ಟೋಪಿ ತೆರವುಗೊಳಿಸಬೇಕು. ನಮಾಜಿಗರು ಮನೆಯಿಂದಲೇ ಜಾನಿಮಾಜ್ ಅಥವಾ ಚಾಪೆ ತರಬೇಕು. 5 ಹೊತ್ತಿನ ಫರಜ್ ನಮಾಜ್‍ಗಳನ್ನು ಮಾತ್ರ ಮಸೀದಿಗಳಲ್ಲಿ ಪ್ರಾರ್ಥಿಸಬೇಕು. ಸುನ್ನತ್ ನಫಿಲ್ ಪ್ರಾರ್ಥನೆಗಳನ್ನು ಮನೆಯಲ್ಲಿಯೇ ಮಾಡಬೇಕು. ಮಸೀದಿಯಲ್ಲಿ ನಮಾಜ್ ಮಾಡುವ ಜಾಗದಲ್ಲಿ ಪೇಂಟ್ ಅಥವಾ ಟೇಪ್‍ನಲ್ಲಿ 2 ಮೀಟರ್ (6 ಅಡಿ) ಅಂತರದಲ್ಲಿ ಕಡ್ಡಾಯವಾಗಿ ಗುರುತು ಮಾಡಿರಬೇಕು. ನಮಾಜಿಗಳು ಮಸೀದಿಯಲ್ಲಿ ಮತ್ತೊಬ್ಬರಿಂದ ಕನಿಷ್ಟ 2 ಮೀಟರ್ (6 ಅಡಿ) ಅಂತರವನ್ನು ಕಾಯ್ದಿರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಮಾಜಿನ ನಂತರ ಬಯಾನ್, ಕುರಾನ್, ಹದೀಸ್ ಪ್ರವಚನಗಳನ್ನು ಮಸೀದಿಯಲ್ಲಿ ಮಾಡಬಾರದು.
ಜವಬ್ದಾರಿಯುತ ನಾಗರಿಕರಾಗಿ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಯಲು ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಕೈಜೋಡಿಸಬೇಕು. ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೊಡಗು ಜಿಲ್ಲಾ ವಕ್ಫ್ ಅಧಿಕಾರಿ ಸಾಹಿದ್ ರೆಹಮಾನ್ ಅವರು ಕೋರಿದ್ದಾರೆ.