ಅಗಸ ಮತ್ತು ಕ್ಷೌರಿಕ ವೃತ್ತಿದಾರರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಮನವಿ

11/06/2020

ಕೋವಿಡ್-19 ರ ಲಾಕ್ ಡೌನ್ ಸಂಬಂಧ ಸಂಕಷ್ಟಕ್ಕೊಳಗಾದ ಅಗಸ ಮತ್ತು ಕ್ಷೌರಿಕ ವೃತ್ತಿಯಲ್ಲಿ ನಿರತರಾದ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಸರ್ಕಾರವು ರೂ. 5000/- ಪರಿಹಾರ ಧನವನ್ನು ಘೋಷಿಸಿದ್ದು, ಸದರಿ ಪರಿಹಾರವನ್ನು ಪಡೆಯಲು ಅರ್ಹ ಅಗಸ ಮತ್ತು ಕ್ಷೌರಿಕ ವೃತ್ತಿದಾರರು ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in ಮೂಲಕ ಅರ್ಜಿ ಸಲ್ಲಿಸಲು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್,ವಿಳಾಸ ದೃಢೀಕರಣ ಪತ್ರ (ಚುನಾವಣಾ ಗುರುತಿನ ಚೀಟಿ/ಚಾಲನಾ ಪರವಾನಗಿ/ಪಡಿತರ ಚೀಟಿ), ಐ.ಎಫ್.ಎಸ್ ಕೋಡ್ ಮತ್ತು ಖಾತೆ ಸಂಖ್ಯೆ ಸ್ಪಷ್ಟವಾಗಿ ಕಾಣುವಂತೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಸ್ವಯಂ ಘೋಷಣೆ ಪತ್ರದೊಂದಿಗೆ (ಈ ಪತ್ರದಲ್ಲಿ ಮೊಬೈಲ್ ನಂಬರನ್ನು ಕಡ್ಡಾಯವಾಗಿ ನಮೂದಿಸುವುದು), ವೃತ್ತಿ ನಿರ್ವಹಿಸುತ್ತಿರುವ ಬಗ್ಗೆ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿ/ ಕಂದಾಯ ಅಧಿಕಾರಿ/ಕಂದಾಯ ನಿರೀಕ್ಷಕರುಗಳಿಂದ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರ್ / ಉಪ ತಹಶೀಲ್ದಾರ್ / ಕಂದಾಯ ಪರಿವೀಕ್ಷಕರು /ನಗರ ಸಭೆ ಪಟ್ಟಣ ಪಂಚಾಯತಿಯ ಅಧಿಕಾರಿಗಳು/ ಕಾರ್ಮಿಕ ನಿರೀಕ್ಷಕರು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಂದ ಪಡೆದ ಉದ್ಯೋಗ ಪ್ರಮಾಣ ಪತ್ರ ದಾಖಲೆಗಳು ಅಗತ್ಯವಿರುತ್ತದೆ.

ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಗ್ರಾಮ ಪಂಚಾಯತಿ/ಪಟ್ಟಣ ಪಂಚಾಯತಿ / ತಾಲ್ಲೂಕು ಕಚೇರಿ / ಕಾರ್ಮಿಕ ನಿರೀಕ್ಷಕರುಗಳ ಕಚೇರಿಯನ್ನು ಸಂಪರ್ಕಿಸುವುದು

ಅರ್ಜಿ ಸಲ್ಲಿಸಲಾದ ಅರ್ಹರಿಗೆ ರೂ.5000/- ಪರಿಹಾರ ಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಸರ್ಕಾರದವತಿಯಿಂದ ಜಮೆ ಮಾಡಲಾಗುವುದು.