ಸೋಮವಾರಪೇಟೆ ಸಂತೆಯನ್ನು ಹೈಟೆಕ್ ಮಾರುಕಟ್ಟೆಗೆ ಸ್ಥಳಾಂತರಿಸಲು ಒತ್ತಾಯ

June 11, 2020

ಸೋಮವಾರಪೇಟೆ ಜೂ.11 : ಪ್ರಸ್ತುತ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಡೆಯುತ್ತಿರುವ ಸಂತೆಯನ್ನು ಪಟ್ಟಣದ ಹೈಟೆಕ್ ಮಾರ್ಕೆಟ್‍ಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಪ್ರಮುಖರು ತಾಲೂಕು ತಹಸೀಲ್ದಾರ್‍ಗೆ ಮನವಿ ಮಾಡಿದ್ದಾರೆ.
ಆರ್‍ಎಂಸಿ ಮಾರುಕಟ್ಟೆಯಲ್ಲಿ ವಾರದ ಸಂತೆ ನಡೆಯುತ್ತಿರುವದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ವರ್ತಕರೂ ಸಹ ಸಮಸ್ಯೆ ಎದುರಿಸುತ್ತಿದ್ದು, ಪ.ಪಂ.ನ ಹೈಟೆಕ್ ಮಾರುಕಟ್ಟೆಯಲ್ಲೇ ವಾರದ ಸಂತೆಯನ್ನು ನಡೆಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸಂತೆ ದಿನವಾದ ಸೋಮವಾರದಂದು ಪಟ್ಟಣದಲ್ಲಿ ಸಂಚಾರ ಅವ್ಯವಸ್ಥೆ ಹೆಚ್ಚುತ್ತಿದ್ದು, ಪೊಲೀಸ್ ಇಲಾಖೆ ಸುಗಮ ಸಂಚಾರ ಮತ್ತು ವಾಹನ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಇದ್ದಂತೆ ಸಂತೆ ದಿನವಾದ ಸೋಮವಾರದಂದು ಏಕಮುಖ ಸಂಚಾರಕ್ಕೆ ಕ್ರಮ ವಹಿಸಬೇಕೆಂದು ಸಮಿತಿಯ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಸಂಚಾಲಕ ಎಸ್.ಮಹೇಶ್, ಕಾರ್ಯದರ್ಶಿ ದೀಪಕ್, ಪದಾಧಿಕಾರಿ ಅಭಿಷೇಕ್ ಅವರುಗಳು ಗಮನಕ್ಕೆ ತಂದರು.
ಈ ಬಗ್ಗೆ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವದು ಎಂದು ತಹಸೀಲ್ದಾರ್ ಗೋವಿಂದರಾಜು ತಿಳಿಸಿದರು.