ರಾಹುಲ್ ವಿರುದ್ಧ ಸೇನೆ ಅಸಮಾಧಾನ

ನವದೆಹಲಿ ಜೂ.11 : ಲಡಾಖ್ ಗಡಿಯಲ್ಲಿ ಚೀನಾ ಜೊತೆಗಿನ ಭಾರತದ ಪ್ರಸ್ತುತ ನಿಲುವು ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳು “ಅನಪೇಕ್ಷಿತ ಮತ್ತು ಶೋಚನೀಯ” ಎಂದು ಸಶಸ್ತ್ರ ಪಡೆಗಳ ಹಿರಿಯರು, ಪರಿಣತರು ಖಂಡಿಸಿದ್ದಾರೆ.
ಈ ಕುರಿತು ಗುರುವಾರ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ 71 ಹಿರಿಯ ಅಧಿಕಾರಿಗಳು ಸಹಿ ಹಾಕಿದ್ದು, “ನಾವು ಸೇನೆ, ನೌಕಾಪಡೆ ಮತ್ತು ವಾಯುಸೇನೆಯಲ್ಲಿ ಸಾಕಷ್ಟು ಕಾಲ ಸೇವೆ ಸಲ್ಲಿಸಿದ ಅನುಭವಿಗಳು, ಪ್ರಸ್ತುತ ಲಡಾಖ್ ಗಡಿಯಲ್ಲಿ ಭಾರತೀಯ ಮತ್ತು ಚೀನಾದ ಪಡೆಗಳ ನಡುವಿನ ನಿಲುಗಡೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರ ಇತ್ತೀಚಿನ ಅನಪೇಕ್ಷಿತ ಟ್ವೀಟ್‍ಗಳು ಮತ್ತು ಕಾಮೆಂಟ್‍ಗಳು ಆತಂಕ ಹುಟ್ಟಿಸುತ್ತವೆ ಎಂದಿದ್ದಾರೆ.
ರಾಹುಲ್ ಗಾಂಧಿ ಈ ವಿವಾದದ ಇತಿಹಾಸವನ್ನಾದರೂ ಓದಬೇಕೆಂದು ನಾವು ಬಯಸುತ್ತೇವೆ ಮತ್ತು 1962 ಅನ್ನು ಅವರು ಎಂದಿಗೂ ಮರೆಯಬಾರದು, ಅವರ ಮುತ್ತಜ್ಜ ಜವಾಹರಲಾಲ್ ನೆಹರೂ ಅವರೇ ನೇತೃತ್ವ ವಹಿಸಿದ್ದು, ಮತ್ತು ನಾವು ಆಗ ಸಂಪೂರ್ಣ ಸಿದ್ಧತೆಯಿಲ್ಲದೆ ಸಿಕ್ಕಿಬಿದ್ದಿದ್ದೆವು. ಅದರಿಂದ ಬಹಳ ಅವಮಾನವನ್ನು ಅನುಭವಿಸಬೇಕಾಯಿತು ನಮ್ಮ ಸೈನಿಕರು ಧೈರ್ಯದಿಂದ ಹೋರಾಡಿ ಚೀನಾಕ್ಕೆ ಭಾರಿ ಪ್ರಮಾಣದ ಸಾವುನೋವುಗಳನ್ನು ಉಂಟುಮಾಡಿದರೂ, ಚೀನಾದ ಕೈಯಲ್ಲಿ ಸೋಲು ಅನುಭವಿಸಬೇಕಾಯಿತು ಎಂದಿದ್ದಾರೆ.
