ಗ್ರಾ.ಪಂ ಗಳಿಗೆ ಆಡಳಿತಾಧಿಕಾರಿ ನೇಮಕ

12/06/2020

ಬೆಂಗಳೂರು ಜೂ.12 : ಗ್ರಾಮ ಪಂಚಾಯತ್ ಗಳಿಗೆ ಶೀಘ್ರ ಚುನಾವಣೆ ನಡೆಸಲು ಉದ್ದೇಶಿಸಿದ್ದು, ಅಲ್ಲಿಯವರೆಗೆ ಪಂಚಾಯತ್ ಗಳಿಗೆ ಆಡಳಿತಾಧಿಕಾರಿ ನೇಮಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಹೇಳಿದ್ದಾರೆ.
ಇಂದು ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆ.ಸಿ. ಮಾಧುಸ್ವಾಮಿ, ಜಿಲ್ಲಾಧಿಕಾರಿ ಹಂತದಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಲಾಗುವುದು. ತಕ್ಷಣದಿಂದ ಜಾರಿಗೆ ಬರುವಂತೆ ಈ ಕುರಿತು ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಉಪ ಖನಿಜ ನಿಯಮಾವಳಿ ಬದಲಿಸಲಾಗಿದೆ. ಇದರಿಂದ ತೂಕದ ಮೇಲೆ ರಿಯಾಯಿತಿ, ಬಿಲ್ ಕಟಾವಿನಲ್ಲಿ ರಾಜಧನ ಕಡಿಮೆ ಮಾಡುವ, ಸಣ್ಣ ಪ್ರಮಾಣದ ತೆರಿಗೆ, ಗ್ರಾನೈಟ್ ಉದ್ಯಮದಲ್ಲಿ ಕಡಿಮೆ ರಾಜಧನ ವಸೂಲಿ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಇಂದಿರಾ ಕ್ಯಾಂಟೀನ್ ನಲ್ಲಿ ದರ ಹೆಚ್ಚಿಸಬೇಕು ಎಂಬ ವಿಚಾರ ಚರ್ಚೆಗೆ ಬಂದಿತ್ತು. ಬೆಲೆ ಹೆಚ್ಚಳ ಅನಿವಾರ್ಯ ಎಂಬ ಪ್ರಸ್ತಾಪವಾಯಿತಾದರೂ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ಈ ಪ್ರಸ್ತಾವದ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಮಹಾರಾಣಿ, ಮಂಡ್ಯ ಕ್ಲಸ್ಟರ್ ವಿವಿಗೆ ಅಧಿಕಾರಿಗಳ ನೇಮಕ. ಬೆಂಗಳೂರು ಕೇಂದ್ರ ವಿವಿಯ ಹೆಸರು ಬದಲಿಸಿ ಬೆಂಗಳೂರು ಸಿಟಿ ವಿವಿ ಎಂದು ಮರು ನಾಮಕರಣ ಮಾಡುವ, ಸರ್ಕಾರಿ ವಿಜ್ಞಾನ ಕಾಲೇಜಿಗೆ ವಿವಿ ಸ್ವರೂಪ ನೀಡಿ ನೃಪತುಂಗ ವಿವಿ ಎಂದು ಹೆಸರು ಬದಲಿಸುವ ಪ್ರಸ್ತಾವಗಳಿಗೂ ಅನುಮೋದನೆ ದೊರೆತಿದೆ ಎಂದರು.